ADVERTISEMENT

ಹುಡುಗನ ಅಂಕಪಟ್ಟಿಗೆ ಹುಡುಗಿ ಚಿತ್ರ!

​ಪ್ರಜಾವಾಣಿ ವಾರ್ತೆ
Published 11 ಜೂನ್ 2011, 19:30 IST
Last Updated 11 ಜೂನ್ 2011, 19:30 IST
ಹುಡುಗನ ಅಂಕಪಟ್ಟಿಗೆ ಹುಡುಗಿ ಚಿತ್ರ!
ಹುಡುಗನ ಅಂಕಪಟ್ಟಿಗೆ ಹುಡುಗಿ ಚಿತ್ರ!   

ಕಾರವಾರ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಮಾಡಿರುವ ಅವಾಂತರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಅಭ್ಯರ್ಥಿಯೊಬ್ಬರು ಅಂಕಪಟ್ಟಿ ಪಡೆಯಲು ಎರಡು ವರ್ಷಗಳಿಂದ ಅಲೆದಾಡುತ್ತಿದ್ದಾರೆ.
ಅಂಕೋಲಾ ತಾಲ್ಲೂಕಿನ ಸುಂಕಸಾಳದ ನಿವಾಸಿ ಸಾಂತಾ ಫರ್ನಾಂಡಿಸ್ ಅಗಸೂರು ಸರಕಾರಿ ಪ್ರೌಢಶಾಲೆಯಲ್ಲಿ 2004ರಲ್ಲಿ ಬಾಹ್ಯ ಅಭ್ಯರ್ಥಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕೆ ಬರೆದಿದ್ದರು.

ಈ ಪರೀಕ್ಷೆಯಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯದಲ್ಲಿ ಅನುತ್ತೀರ್ಣರಾಗಿದ್ದ ಅವರು ಐದು ವರ್ಷ ನಂತರ, ಅಂದರೆ 2009ರ ಮಾರ್ಚ್ 31ರಂದು ಗಣಿತ ಹಾಗೂ ಏ. 6ರಂದು ವಿಜ್ಞಾನ ವಿಷಯದ ಮರುಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣರಾಗಿದ್ದರು. ಅಂಕಪಟ್ಟಿ ಪಡೆಯಲು ಅಗಸೂರು ಶಾಲೆಗೆ ಹೋದಾಗ ಅವರಿಗೆ ಆಶ್ವರ್ಯ ಕಾದಿತ್ತು.

ಅಂಕಪಟ್ಟಿಯಲ್ಲಿ ಸಾಂತಾ ಫರ್ನಾಂಡೀಸ್ ಭಾವಚಿತ್ರದ ಬದಲು ಹುಡುಗಿಯೊಬ್ಬಳ ಭಾವಚಿತ್ರ ಬಂದಿತ್ತು.
ಅಂಕಪಟ್ಟಿಯಲ್ಲಿ ತಪ್ಪಾಗಿರುವುದನ್ನು ನೋಡಿದ ಶಾಲೆಯ ಮುಖ್ಯ ಶಿಕ್ಷಕರು ಅದನ್ನು ಸರಿಪಡಿಸಲು ಅಂಕಪಟ್ಟಿಯನ್ನು ಪುನಃ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಕಳುಹಿಸಿದರು.

ಕೆಲ ಸಮಯದ ನಂತರ ಪ್ರೌಢ ಶಿಕ್ಷಣ ಮಂಡಳಿಯಿಂದ ಅಂಕಪಟ್ಟಿ ಪ್ರೌಢ ಶಾಲೆಗೆ ಕಳುಹಿಸಿತು. ಆದರೆ ಅದರಲ್ಲಿ ಯಾವುದೇ ಬದಲಾವಣೆಗಳು ಆಗಿರಲಿಲ್ಲ. ಅಂಕಪಟ್ಟಿ ತಿದ್ದುಪಡಿಗೆ ಸಂಬಂಧಪಟ್ಟಂತೆ ಸಾಂತಾ ಫರ್ನಾಂಡೀಸ್ ಅಗಸೂರು ಪ್ರೌಢಶಾಲೆಗೆ ಅಲೆದಾಡುತ್ತಲೇ ಇದ್ದಾರೆ. ಆದರೆ ತಮ್ಮ ಭಾವಚಿತ್ರವಿರುವ ಅಂಕಪಟ್ಟಿ ಮಾತ್ರ ಅವರಿಗೆ ಸಿಗುತ್ತಿಲ್ಲ.

ಕಾರವಾರ ತಾಲ್ಲೂಕಿನ ಸದಾಶಿವಗಡದಲ್ಲಿರುವ ಖಾಸಗಿ ಬ್ಯಾಂಕೊಂದರಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿರುವ ಸಾಂತಾ ಅವರಿಗೆ ಬೆಂಗಳೂರಿನಲ್ಲಿರುವ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಗೆ ಹೋಗಿ ಬರುವಷ್ಟು ಹಣವಿಲ್ಲ.

ಅಂಕಪಟ್ಟಿ ಸಿಗದೇ ಇರುವುದರಿಂದ ಸಾಂತಾ ಅವರಿಗೆ ಸಿಗಬೇಕಾದ ಬಡ್ತಿಯೂ ಸಿಗದಂತಾಗಿದೆ.
ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ಲಕ್ಷ್ಯದಿಂದ ಬೇಸತ್ತಿರುವ ಸಾಂತಾ ಫರ್ನಾಂಡಿಸ್ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಯ ಮುಖ್ಯ ಶಿಕ್ಷಕ ಹಾಗೂ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.