ADVERTISEMENT

ಹುತಾತ್ಮ ಯೋಧರ ಮಕ್ಕಳಿಗೆ ಉಚಿತ ಶಿಕ್ಷಣ

ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಜಾರಿ

ಕೆ.ಓಂಕಾರ ಮೂರ್ತಿ
Published 10 ಜೂನ್ 2018, 19:30 IST
Last Updated 10 ಜೂನ್ 2018, 19:30 IST

‌ಮೈಸೂರು: ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಹುತಾತ್ಮ ಸೈನಿಕರ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಮೈಸೂರು ವಿಶ್ವವಿದ್ಯಾಲಯ ಮುಂದಾಗಿದೆ.

ವಿಶ್ವವಿದ್ಯಾಲಯ ಅಧೀನದ ಕಾಲೇಜುಗಳಲ್ಲಿ ಪದವಿ ಕೋರ್ಸ್‌ನಿಂದ ಪಿಎಚ್‌.ಡಿ ಹಂತದವರೆಗೆ ಉಚಿತ ಶಿಕ್ಷಣ, ಹಾಸ್ಟೆಲ್‌ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಯಾವುದೇ ಕೋರ್ಸ್‌ಗೆ ಪ್ರವೇಶಾತಿ ಬಯಸುವ ಈ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಸೀಟು ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.

‘ಈ ಶೈಕ್ಷಣಿಕ ಸಾಲಿನಿಂದಲೇ ಪ್ರವೇಶಾತಿ ಪಡೆಯಬಹುದು. ರಾಜ್ಯದ ಹುತಾತ್ಮ ಸೈನಿಕರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ವಿ.ವಿ ವ್ಯಾಪ್ತಿಯ ಸರ್ಕಾರಿ, ಖಾಸಗಿ, ಸ್ವಾಯತ್ತ ಕಾಲೇಜುಗಳಲ್ಲಿಯೂ ಶುಲ್ಕದಲ್ಲಿ ವಿನಾಯಿತಿ ಲಭಿಸಲಿದೆ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಡಿ.ಭಾರತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕಾಶ್ಮೀರದ ‘ಉರಿ’ ಸೇನಾ ಶಿಬಿರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೆ ಈಗಾಗಲೇ ಪತ್ರ ಬರೆದಿದೆ.

ಆದರೆ, ಮೈಸೂರು ವಿ.ವಿ ಒಂದು ಹೆಜ್ಜೆ ಮುಂದೆ ಹೋಗಿ, ಯಾವುದೇ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸೈನಿಕರ ಹೆಣ್ಣುಮಕ್ಕಳನ್ನು ಪರಿಗಣಿಸುವುದರ ಜತೆಗೆ ಈ ಸೌಲಭ್ಯವನ್ನು ಗಂಡುಮಕ್ಕಳಿಗೂ ವಿಸ್ತರಿಸಲು ತೀರ್ಮಾನ ಕೈಗೊಂಡಿದೆ. ಇದಕ್ಕೆ ಇಲಾಖೆ ಒಪ್ಪಿಗೆಯೂ ದೊರೆತಿದೆ.

‘ವಿಶ್ವವಿದ್ಯಾಲಯವು ಕೇಂದ್ರ ಹಾಗೂ ಅಧೀನ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವ್ಯವಸ್ಥೆಯೂ ಇರಲಿದೆ. ಎಂಬಿಎ ವ್ಯಾಸಂಗಕ್ಕೆ ₹ 60 ಸಾವಿರ ಶುಲ್ಕವಿದ್ದರೆ ಅಷ್ಟನ್ನೂ ಮನ್ನಾ ಮಾಡುತ್ತೇವೆ’ ಎಂದು ಭಾರತಿ ಹೇಳಿದರು.

ಆತ್ಮಹತ್ಯೆ ಮಾಡಿಕೊಂಡಿರುವ ಮೈಸೂರು ಭಾಗದ ರೈತರ ಮಕ್ಕಳಿಗೂ ಉಚಿತ ಶಿಕ್ಷಣ ನೀಡುವ ನಿರ್ಧಾರವನ್ನು ವಿ.ವಿ ಈ ಹಿಂದೆ ಕೈಗೊಂಡಿತ್ತು.

* ದೇಶಕ್ಕಾಗಿ ಜೀವವನ್ನೇ ತ್ಯಾಗ ಮಾಡುವ ಯೋಧರಿಗೆ ನಾವು ನೀಡುವ ಗೌರವವಿದು. ಅಂಥವರ ಮಕ್ಕಳಿಗೆ ನೈತಿಕ ಸ್ಥೈರ್ಯ, ಭರವಸೆ ತುಂಬುವುದು ನಮ್ಮ ಉದ್ದೇಶ.

–ಡಿ.ಭಾರತಿ, ಕುಲಸಚಿವೆ, ಮೈಸೂರು ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.