ADVERTISEMENT

ಹೃದಯಾಘಾತ ಸೂಚಿಸುವ ನ್ಯಾನೊ ಸೆನ್ಸರ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2017, 19:30 IST
Last Updated 10 ಡಿಸೆಂಬರ್ 2017, 19:30 IST
ನ್ಯಾನೊ ಚಿಪ್‌
ನ್ಯಾನೊ ಚಿಪ್‌   

ಬೆಂಗಳೂರು: ಕೆಲವು ಬಿಂದುಗಳಷ್ಟು ರಕ್ತವನ್ನು ಈ ಸೆನ್ಸರ್‌ ಚಿಪ್‌ನೊಳಗೆ ಹಾಯಿಸಿದರೆ ಸಾಕು ಹೃದಯಾಘಾತದ ಸೂಚನೆಯನ್ನು ಮೊದಲೇ ನೀಡುತ್ತದೆ.

ಮೊಹಾಲಿಯ ಇನ್ಸ್‌ಟಿಟ್ಯೂಟ್‌ ಆಫ್‌ ನ್ಯಾನೊ ಸೈನ್ಸ್ ಅಂಡ್‌ ಟೆಕ್ನಾಲಜಿ ಈ ಸಾಧನವನ್ನು ಅಭಿವೃದ್ಧಿಪಡಿಸಿದೆ. 9ನೇ ವರ್ಷದ ಬೆಂಗಳೂರು ಇಂಡಿಯಾ ನ್ಯಾನೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸ್ಥೆಯ ವಿಜ್ಞಾನಿ ಡಾ.ಪ್ರಿಯಾಂಕ, ಈ ಪುಟಾಣಿ ಚಿಪ್‌ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹೃದಯದ ನಿರ್ವಹಣೆ ಮಹತ್ವದ ಸಂಗತಿ. ಈ ಕಾರ್ಯವನ್ನು ಚಿಪ್‌ ಅತ್ಯಂತ ಸರಳಗೊಳಿಸಿದೆ. ಇದರ ವಿಶೇಷತೆ ಎಂದರೆ ರಕ್ತದಿಂದ ಪ್ಲಾಸ್ಮಾವನ್ನು ಬೇರ್ಪಡಿಸುತ್ತದೆ. ಹೃದಯದ ಕೋಶಗಳಲ್ಲಿ ಮತ್ತು ಪ್ರೊಟೀನ್‌ಗಳಲ್ಲಿ ಆಗುವ ವ್ಯತ್ಯಾಸಗಳನ್ನು ಪತ್ತೆ ಮಾಡುತ್ತದೆ. ಈ ವ್ಯತ್ಯಾಸಗಳ ನಮೂನೆಯನ್ನು ವರ್ಗೀಕರಿಸುತ್ತದೆ ಮತ್ತು ದಾಖಲಿಸುತ್ತದೆ. ಈ ಮೂಲಕ ಸುಲಭವಾಗಿ ಹೃದಯಾಘಾತದ ಸೂಚನೆ ತಿಳಿದುಕೊಳ್ಳಬಹುದು ಎನ್ನುತ್ತಾರೆ ಡಾ.ಪ್ರಿಯಾಂಕ.

ADVERTISEMENT

ಒಂದು ವೇಳೆ ಎದೆ ನೋವಿಗೆ ತುತ್ತಾದರೆ ಈ ಸೆನ್ಸರ್‌ನಲ್ಲಿ ರಕ್ತದ ಬಿಂದುಗಳನ್ನು ಹಾಕಿ ಪರೀಕ್ಷಿಸಿದರೆ ಅದು ಹೃದಯಾಘಾತದ ಪೂರ್ವ ಸೂಚನೆಯೊ ಎಂಬುದನ್ನು ಮೊದಲೇ ತಿಳಿದುಕೊಳ್ಳಬಹುದು. ಕೆಲವು ಬಗೆಯ ಸೆನ್ಸರ್‌ಗಳು ಮಾರುಕಟ್ಟೆಯಲ್ಲಿ ಇವೆ. ಅವುಗಳಲ್ಲಿ ಸಾಮಾನ್ಯವಾಗಿ ಒಂದೇ ಮಾರ್ಕರ್‌ ಇರುತ್ತದೆ. ನಾವು ನ್ಯಾನೊ ತಂತ್ರಜ್ಞಾನ ಬಳಸಿ ನಾಲ್ಕು ಮಾರ್ಕರ್‌ಗಳನ್ನು ಅಳವಡಿಸಿದ್ದೇವೆ. ಮಾರ್ಕರ್‌ ಎಂದರೆ ರೋಗಕ್ಕೆ ಕಾರಣವಾಗುವ ಅಂಶಗಳನ್ನು ಪತ್ತೆ ಮಾಡುವುದು ಎಂದು ತಿಳಿಸಿದರು.

ಸದ್ಯಕ್ಕೆ 72 ಗಂಟೆಗಳಷ್ಟು ಮುಂಚಿತವಾಗಿ ಹೃದಯಾಘಾತ ತಿಳಿಸುವ ಸೆನ್ಸರ್‌ ಅಭಿವೃದ್ಧಿಪಡಿಸಿದ್ದೇನೆ. ಆರು ತಿಂಗಳಿಗೂ ಮೊದಲೇ ಹೃದಯಾಘಾತದ ಸೂಚನೆ ನೀಡುವ ಅಭಿವೃದ್ಧಿಪಡಿಸಲಾಗುತ್ತಿದೆ. ಸೆನ್ಸರ್‌ಗೆ ಪೇಟೆಂಟ್‌ ಪಡೆಯಲು ಅರ್ಜಿ ಸಲ್ಲಿಸಿದ್ದೇವೆ ಎಂದು ಪ್ರಿಯಾಂಕ ತಿಳಿಸಿದರು.

ಸೆನ್ಸರ್‌ಗಳಲ್ಲಿರುವ ಮಾರ್ಕರ್‌ ಅಥವಾ ಆಣ್ವಿಕ ನಿರ್ದಿಷ್ಟ ಬಗೆಯ ಕೋಶಗಳನ್ನು ಗುರುತಿಸಿ ಪ್ರತ್ಯೇಕಿಸುತ್ತದೆ. ಹೃದಯಾಘಾತದ ಸೂಚನೆ ಪಡೆಯಲು ನಿರ್ದಿಷ್ಟ ಬಗೆಯ ಪ್ರೊಟೀನ್‌ ಬಳಸಲಾಗುತ್ತದೆ. ಈ ಪ್ರೊಟೀನ್‌ ಹೃದಯಾಘಾತಕ್ಕೆ ಕಾರಣವಾಗುವ ಅಂಶವನ್ನು ಪತ್ತೆ ಮಾಡುತ್ತದೆ.

‘ನ್ಯಾನೊ ನಾಸಿಕ ಅಭಿವೃದ್ಧಿ’
ಕ್ಯಾನ್ಸರ್‌ ಪತ್ತೆ ಮಾಡಲು ‘ನ್ಯಾನೊ ನಾಸಿಕ’ವನ್ನು  (ನ್ಯಾನೊ ನೋಸ್‌) ಇಸ್ರೇಲಿ ಯುವ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ ಎಂದು ಖ್ಯಾತ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ತಿಳಿಸಿದರು.

9ನೇ ಬೆಂಗಳೂರು ಇಂಡಿಯಾ ನ್ಯಾನೊ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಅವರು, ಈ ರೀತಿಯ ವಿಶಿಷ್ಟ ಆಲೋಚನೆಗಳನ್ನು ಮುಂದಿಟ್ಟುಕೊಂಡು ಸಂಶೋಧನೆಯಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ಮತ್ತು ಚಂಡೀಗಡದಲ್ಲಿ ನ್ಯಾನೊ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ನ್ಯಾನೊ ಟ್ಯೂಬ್‌ ಮತ್ತು ಗ್ರಾಫೇನ್‌ಗಳ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮೊಹಾಲಿಯ ಇನ್‌ಸ್ಟಿಟ್ಯೂಟ್‌ ಆಫ್‌ ನ್ಯಾನೊ ಸೈನ್ಸ್‌ ಅಂಡ್‌ ಟೆಕ್ನಾಲಜಿಯ ಅಧ್ಯಕ್ಷ ಅಶೋಕ್‌ ಕುಮಾರ್‌ ಗಂಗೂಲಿ ಅವರಿಗೆ 2017ರ ಸಾಲಿನ ನ್ಯಾನೊ ಪ್ರಶಸ್ತಿ ನೀಡಲಾಯಿತು. ಇದರೊಂದಿಗೆ ₹ 1 ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್‌.ಸೀತಾರಾಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.