ADVERTISEMENT

ಹೆಚ್.ಡಿ.ದೇವೇಗೌಡ –ಸಿದ್ದರಾಮಯ್ಯ ವಾಕ್ಸಮರ ತೀವ್ರ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 11:11 IST
Last Updated 5 ಏಪ್ರಿಲ್ 2018, 11:11 IST
ಹೆಚ್.ಡಿ.ದೇವೇಗೌಡ –ಸಿದ್ದರಾಮಯ್ಯ ವಾಕ್ಸಮರ ತೀವ್ರ
ಹೆಚ್.ಡಿ.ದೇವೇಗೌಡ –ಸಿದ್ದರಾಮಯ್ಯ ವಾಕ್ಸಮರ ತೀವ್ರ   

ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಹೆಚ್‌.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವಿನ ವಾಕ್ಸಮರ ತೀವ್ರಗೊಂಡಿದೆ.

ಚುನಾವಣಾ ಪ್ರಕ್ರಿಯೆ ಪಾರದರ್ಶಕವಾಗಿರಬೇಕು ಆದರೆ ಇದರ ಬಗ್ಗೆ ನನಗೆ ಅನುಮಾನ ಇದೆ ಎಂದು  ಮುಖ್ಯ ಚುನಾವಣಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ  ಹೆಚ್.ಡಿ.ದೇವೇಗೌಡ ಹೇಳಿದರು.

ಈ ಕುರಿತು ಭಾರತ ಚುನಾವಣಾ ಆಯೋಗದ ಆಯುಕ್ತ ರಾವತ್ ಹಾಗೂ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ADVERTISEMENT

‘ಸರ್ಕಾರದ ಕೆಲವು ಅಧಿಕಾರಿಗಳ ನಡವಳಿಕೆ ಬಗ್ಗೆ ಅನುಮಾನ ಮೂಡಿದ್ದು, ಈ ಕುರಿತು ಚುನಾವಣ ಆಯೋಗದ ಗಮನಕ್ಕೆ ತಂದಿದ್ದೇನೆ’ ಎಂದರು. 

ಹ ಇಲಾಖೆಯಲ್ಲಿ ಕಾನೂನು ಸಡಿಲವಾಗಿದೆ. ನಿಷ್ಠಾವಂತ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದೆ. ಸೂಪರ್ ಹೋಮ್ ಮಿನಿಸ್ಟರ್ ಅವರನ್ನು ಯಾವಾಗ ತೆಗೆದಿದೆ ಸರ್ಕಾರ? ಕೆಂಪಯ್ಯ ಅವರ ಕಚೇರಿ ವಿಕಾಸಸೌಧದಿಂದ ತೆಗೆಯಲಾಗಿದೆ ಆದರೆ ಅದು ಬೇರೆ ಕಡೆಗೆ ಶಿಫ್ಟ್ ಆಗಿದೆ ಇದರ ಬಗ್ಗೆ ಆಯೋಗದ ಗಮನಕ್ಕೆ ತರಲಾಗಿದೆ ಎಂದರು.

ರಾಜ್ಯ ಸರ್ಕಾರ ರಾಮನಗರ, ಹಾಸನ, ಮಂಡ್ಯ, ಮೈಸೂರು ಭಾಗಗಳಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಸರ್ಕಾರಿ ವಾಹನಗಳಲ್ಲಿ ಹಣ ಸಾಗಿಸುತ್ತಿರುವುದು ಗೃಹ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಗೃಹ ಇಲಾಖೆಯಲ್ಲಿ ಕೆಂಪಯ್ಯ ಅವರ ಕೈ ಚಳಕದ ಬಗ್ಗೆ ಆಯೋಗಕ್ಕೆ ಮಾಹಿತಿ ನೀಡಿದ್ದೇನೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತೀರುಗೇಟು
ಬೆಂಗಳೂರು:
‘ನಾವು ಯಾವುದೇ ಅಧಿಕಾರಿಗಳನ್ನು ಚುನಾವಣೆಗೆ ದುರ್ಬಳಕೆ ಮಾಡಿಕೊಂಡಿಲ್ಲ. ಈ ರೀತಿ ಆರೋಪ ಮಾಡಿರುವ ದೇವೇಗೌಡರೇ ದುರ್ಬಳಕೆ ಮಾಡಿಕೊಂಡಿರಬಹುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಚುನಾವಣಾ ಆಯೋಗಕ್ಕೆ ನೀಡಿದ ದೂರಿನ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಅದಕ್ಕೆ ಅವರು ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದಾರೆ. ಹಾಗೊಂದು ವೇಳೆ ನಾವು ಈ ರೀತಿ ಅಕ್ರಮ ಮಾಡಿದ್ದರೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತದೆ’ ಎಂದರು.

ನೆಲಮಂಗಲದಲ್ಲಿ ನಡೆಯುವ ಕೆಸಿಎಲ್ ಕ್ರಿಕೆಟ್ ಕಪ್ ಉದ್ಘಾಟನೆಗೆ ನನ್ನ ಆಹ್ವಾನಿಸಲು ನಟ ಸುದೀಪ್ ಬಂದಿದ್ದರು. ಅವರ ಭೇಟಿ ವೇಳೆ ಬೇರೆ ಏನು ಚರ್ಚೆ ಮಾಡಿಲ್ಲ. ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳುವಂತೆ ಸುದೀಪ್‌ಗೆ ನಾನು ಹೇಳಿಲ್ಲ’ ಎಂದರು.

ಚಾಮುಂಡೇಶ್ವರಿಯಿಂದಲೇ ಈ ಬಾರಿ ಸ್ಪರ್ಧೆ ಮಾಡುತ್ತೇನೆ. 2006ರಲ್ಲಿ ಕುಮಾರಸ್ವಾಮಿ ಹಾಗು ಯಡಿಯೂರಪ್ಪ ಒಂದಾಗಿದ್ದರು. ಆಗ ಚಾಮುಂಡೇಶ್ವರಿಯಲ್ಲೇ ನಾನೇ ತಾನೆ ಗೆಲುವು ಕಂಡಿದ್ದು. ಈಗ ಅವರಿಬ್ಬರ ಮಾತಿನ ದಾಟಿ ನೋಡಿದರೆ ಇಬ್ಬರು ಒಂದಾಗಿದ್ದಾರೆ ಎಂಬುದು ತಿಳಿಯುತ್ತದೆ ಎಂದರು.

ಕುಮಾರಸ್ವಾಮಿ ಹಾಗೂ ದೇವೇಗೌಡರು ಎಲ್ಲಾದರೂ ಬಿಜೆಪಿ ವಿರುದ್ದ ಮಾತನಾಡೀದ್ದಾರಾ. ಅವರು ನನ್ನನ್ನು ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಎಲ್ಲ ಬಿಟ್ಟು ನನ್ನ ಕ್ಷೇತ್ರದ ಬಗ್ಗೆ ಮಾತ್ರ ಚರ್ಚೆ ನಡೆಸುತ್ತಿದ್ದಾರೆ. ನೆಗೆಟಿವ್ ಬಿಟ್ಟು ಕ್ಷೇತ್ರದ  ವಾಸ್ತವಾಂಶದ ಬಗ್ಗೆ ಚರ್ಚೆ ಮಾಡಲಿ’ ಎಂದರು.

ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ತಮಿಳುನಾಡು ಬಂದ್ ಕುರಿತು ಪ್ರತಿಕ್ರಿಯಿಸಿದ ಅವರು, ತಮಿಳುನಾಡು ಸರ್ಕಾರದ ವರ್ತನೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಮೇಲೆ ಈ ಒತ್ತಡ ತರುವುದು ಸರಿಯಲ್ಲ. ಈಗಾಗಲೇ ಕೇಂದ್ರ ಸರ್ಕಾರ ಸ್ಕೀಂ ರಚನೆ ಮಾಡುವ ಬಗ್ಗೆ ಕೂಡ ಹೇಳಿದೆ. ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರದ ಒತ್ತಾಯಕ್ಕೆ ಯಾವುದೇ ಕಾರಣಕ್ಕೂ ಮಣಿಯಬಾರದು ಎಂದರು.

‘ಅಭ್ಯರ್ಥಿಗಳ ಪಟ್ಟಿ ಅಂತಿಮ’
ಟಿಕೆಟ್‌ ಹಂಚಿಕೆ ಕುರಿತು ಈಗಾಗಲೇ ನಾನು ಮತ್ತು ಪರಮೇಶ್ವರ ಅವರು ಚರ್ಚೆ ನಡೆಸಿದ್ದೇವೆ. ಅಭ್ಯರ್ಥಿಗಳ ಪಟ್ಟಿಯನ್ನು ಮೂರು ಹಂತದಲ್ಲಿ ಸಿದ್ದಪಡಿಸಿ ನಮ್ಮ ಲಿಸ್ಟ್ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸುತ್ತೇವೆ. ಏ.15ರ ಒಳಗೆ 224 ಕ್ಷೇತ್ರಗಳ ಪಟ್ಟಿ ಅಂತಿಮಗೊಳಿಸಿ ಪ್ರಕಟಿಸಲಾಗುತ್ತದೆ ಎಂದರು.

ನಾನು ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಿಲ್ಲ. ಚಾಮುಂಡೇಶ್ವರಿ ಇಂದಲೇ ನನ್ನ ಸ್ಪರ್ಧೆ. ಆದರೆ ವರುಣ, ಬೀಳಗಿ, ಕೋಲಾರ, ಬಾದಾಮಿ, ಕೊಪ್ಪಳ ಚಿತ್ರದುರ್ಗದಿಂದ ಸ್ವರ್ಧಿಸುವಂತೆ ಒತ್ತಡ ಹೆಚ್ಚಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.