ADVERTISEMENT

ಹೆರಿಗೆ ರಜೆ ನೀಡಲು ನಿರಾಕರಿಸಿದ ಖಾಸಗಿ ಕಂಪನಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ‌ ಮಹಿಳೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 12:08 IST
Last Updated 17 ಏಪ್ರಿಲ್ 2018, 12:08 IST
ಹೆರಿಗೆ ರಜೆ ನೀಡಲು ನಿರಾಕರಿಸಿದ ಖಾಸಗಿ ಕಂಪನಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ‌ ಮಹಿಳೆ
ಹೆರಿಗೆ ರಜೆ ನೀಡಲು ನಿರಾಕರಿಸಿದ ಖಾಸಗಿ ಕಂಪನಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ‌ ಮಹಿಳೆ   

ಬೆಂಗಳೂರು: ಹೆರಿಗೆ ರಜೆ ನೀಡಲು ನಿರಾಕರಿಸಿದ ನಗರದ ಖಾಸಗಿ ಕಂಪನಿ ವಿರುದ್ಧ ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಮಂಗಳವಾರ ಈ ಅರ್ಜಿ ವಿಚಾರಣೆ‌ ನಡೆಸಿದ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ನಗರದ ‘ಫ್ಲೋಸರ್ಟ್’ ಹೆಸರಿನ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಭಾರತ ಲಿಮಿಟೆಡ್ ಕಂಪನಿಯಲ್ಲಿ ಅರ್ಜಿದಾರ ಮಹಿಳೆ 8 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಇವರು 2014ರಲ್ಲಿ ಮದುವೆಯಾಗಿದ್ದು, 2017ರಲ್ಲಿ ಗಂಡು ಮಗುವಿಗೆ ಜಯನಗರದ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು.
ಈ ಸಂದರ್ಭದಲ್ಲಿ ತಾವು ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆಗೆ ಹೆರಿಗೆ ರಜೆ ಕೋರಿ ಅರ್ಜಿ ಸಲ್ಲಿಸಿದ್ದರು.

ಆದರೆ ಕಂಪನಿಯು, ‘10ಕ್ಕಿಂತ ಹೆಚ್ಚು ನೌಕರರಿದ್ದರೆ ಮಾತ್ರ ಹೆರಿಗೆ ರಜೆ ನೀಡಲು ಕಾನೂನಿನಲ್ಲಿ ಅವಕಾಶವಿದೆ’ ಎಂದು ಮಹಿಳೆಗೆ ತಿಳಿಸಿತ್ತು.
ಇದನ್ನು ಆಕ್ಷೇಪಿಸಿ ಮಹಿಳೆ ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿಗೆ ಪತ್ರ ಬರೆದು ಹೆರಿಗೆ ರಜೆಯ ಭತ್ಯೆ ಹಾಗೂ ಇತರ ಸೌಲಭ್ಯಗಳನ್ನು ನೀಡುವಂತೆ ಕೋರಿದ್ದರು.

ಇದಕ್ಕುತ್ತರಿಸಿದ್ದ ಸಚಿವಾಲಯ, ಮೆಟರ್ನಿಟಿ ಬೆನಿಫಿಟ್ ಆ್ಯಕ್ಟ್-1961, ಕಲಂ 2ರ ಅನುಸಾರ, ಕಂಪನಿಯಲ್ಲಿ 8 ಜನ ನೌಕರರಿದ್ದು, ನಿಮಗೆ ಹೆರಿಗೆ ಭತ್ಯೆ ಅನ್ವಯವಾಗುವುದಿಲ್ಲ ಎಂದು ತಿಳಿಸಿತ್ತು.

ಇದನ್ನು ಪ್ರಶ್ನಿಸಿರುವ ಮಹಿಳೆ, ‘ಇದು ಸಂವಿಧಾನದ 42ನೇ ವಿಧಿಗೆ ವಿರುದ್ಧವಾಗಿದೆ’ ಎಂದು ಆಕ್ಷೇಪಿಸಿದ್ದಾರೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ವಕೀಲ ಎಸ್.ವಿ. ಗುರುಕುಮಾರ್, ‘ಕೇಂದ್ರ ಸರ್ಕಾರ ಈ ದಿಸೆಯಲ್ಲಿ ಕಾನೂನಿಗೆ ತಿದ್ದುಪಡಿ ತಂದರೆ ರಾಜ್ಯ ಸರ್ಕಾರ ಅದನ್ನು ಅನುಷ್ಠಾನಗೊಳಿಸಲು ಸಿದ್ಧವಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.