ADVERTISEMENT

ಹೈಕೋರ್ಟ್‌ಗೆ ಶೀಘ್ರ ಇಬ್ಬರು ನ್ಯಾಯಮೂರ್ತಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST

ಬೆಂಗಳೂರು: ‘ರಾಜ್ಯ ಹೈಕೋರ್ಟ್‌ಗೆ ಶೀಘ್ರವೇ ಇಬ್ಬರು ಹೊಸ ನ್ಯಾಯಮೂರ್ತಿಗಳು ನೇಮಕಗೊಳ್ಳುವ ಸಾಧ್ಯತೆಯಿದೆ. ಈ ದಿಸೆಯಲ್ಲಿನ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿವೆ’ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಹೇಳಿದರು.

ಗುರುವಾರ ನಿವೃತ್ತಿ ಹೊಂದಿದ ಹೈಕೋರ್ಟ್‌ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರಿಗೆ ಹೈಕೋರ್ಟ್‌ನಲ್ಲಿ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕರ್ನಾಟಕ ಹೈಕೋರ್ಟ್ ಹಿಂದೆಂದೂ ಕಂಡರಿಯದ ರೀತಿಯಲ್ಲಿ ನ್ಯಾಯಮೂರ್ತಿಗಳ ಕೊರತೆ ಎದುರಿಸುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಾಟೀಲ, ‘ಯುವ ವಕೀಲರು ತಮ್ಮ ಸಾಮರ್ಥ್ಯ ಮತ್ತು ದಕ್ಷತೆ ಮೂಲಕ ವೃತ್ತಿಯಲ್ಲಿ ನಿರಂತರ ಶ್ರಮ ವಹಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ‌’ ಎಂದು ಹೇಳಿದರು.

ADVERTISEMENT

ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ, ಪ್ರಧಾನ ಕಾರ್ಯದರ್ಶಿ ಎಂ.ಎನ್. ಗಂಗಾಧರಯ್ಯ, ಹಿರಿಯ ವಕೀಲ ಉದಯ ಹೊಳ್ಳ ಇದ್ದರು.

ಪಾಟೀಲ 14 ವರ್ಷ ನ್ಯಾಯಮೂರ್ತಿಗಳಾಗಿದ್ದರು. ಇವರ ನಿವೃತ್ತಿಯಿಂದಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳ ಸದ್ಯದ ಸಂಖ್ಯೆ 29ಕ್ಕೆ ಇಳಿದಿದೆ. 2018ರ ಜೂನ್‌ 15ರಂದು ನ್ಯಾಯಮೂರ್ತಿ ಬಿ.ಶ್ರೀನಿವಾಸೇಗೌಡ ಹಾಗೂ ಸೆಪ್ಟೆಂಬರ್‌ 30ರಂದು ಆರ್‌.ಬಿ.ಬೂದಿಹಾಳ್‌ ನಿವೃತ್ತಿ ಹೊಂದಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.