ಬೆಂಗಳೂರು: ಕೇಂದ್ರ ಪಠ್ಯಕ್ರಮ ಬೋಧಿಸುವ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳು ಕೂಡ ಕರ್ನಾಟಕ ಶಿಕ್ಷಣ ಕಾಯ್ದೆಗೆ ಒಳಪಡುತ್ತವೆ ಎಂಬ ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಹಲವಾರು ಶಾಲೆಗಳು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿವೆ.
1998ರ ಕರ್ನಾಟಕ ಶಿಕ್ಷಣ ಕಾಯ್ದೆಯ ವ್ಯಾಪ್ತಿಯಿಂದ ಈ ಶಾಲೆಗಳನ್ನು ಹೊರಕ್ಕಿಟ್ಟು 1(3) (3-ಎ) ಕಲಮಿಗೆ ಸರ್ಕಾರ ತಿದ್ದುಪಡಿ ಮಾಡಲಾಗಿತ್ತು. ಆದರೆ ಈ ತಿದ್ದುಪಡಿಯನ್ನು ಏಕಸದಸ್ಯಪೀಠ ರದ್ದು ಮಾಡಿತ್ತು.
ಶಾಲೆಗಳು ಎರ್ರಾಬಿರ್ರಿ ಶುಲ್ಕ ವಸೂಲು ಮಾಡುವುದಕ್ಕೂ ಕೋರ್ಟ್ ಕಡಿವಾಣ ಹಾಕಿತ್ತು. ಇದರ ಜೊತೆಗೆ ರಾಜ್ಯ ಪಠ್ಯಕ್ರಮದಂತೆ ಈ ಶಾಲೆಗಳೂ ಪಠ್ಯಕ್ರಮ ಬೋಧಿಸಬೇಕು ಎಂದು ಪೀಠ ನಿರ್ದೇಶಿಸಿತ್ತು. ಇವೆಲ್ಲವುಗಳ ರದ್ದತಿಗೆ ಈ ಶಾಲೆಗಳು ಈಗ ಮೇಲ್ಮನವಿ ಮೂಲಕ ಕೋರಿವೆ.
ಎಲ್ಲ ಕಾಯ್ದೆಗಳಿಗೆ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ತಿದ್ದುಪಡಿ ಮಾಡಲಾಗುತ್ತದೆ. ಇಂತಹ ತಿದ್ದುಪಡಿಗಳನ್ನು ರದ್ದು ಮಾಡುವ ಪೂರ್ವದಲ್ಲಿ ಅದರ ವಾದವನ್ನೂ ಆಲಿಸಬೇಕು.
ಆದರೆ ಈ ಪ್ರಕರಣದಲ್ಲಿ ಏಕಸದಸ್ಯಪೀಠವು ವಾದ ಆಲಿಸದೇ ಏಕಾಏಕಿ ತೀರ್ಪು ನೀಡಿದೆ ಎನ್ನುವುದು ಈ ಶಾಲೆಗಳ ಆರೋಪ.
ಅಂತೆಯೇ, ವಿದ್ಯುತ್, ನೀರು, ಭೂಮಿ ಇತ್ಯಾದಿಗಳ ಸವಲತ್ತುಗಳನ್ನು ರಾಜ್ಯ ಸರ್ಕಾರದಿಂದ ಪಡೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪಠ್ಯ ಕ್ರಮ ಬೋಧಿಸುವುದು ಈ ಶಾಲೆಗಳ ಕರ್ತವ್ಯ ಎನ್ನುವ ಏಕಸದಸ್ಯಪೀಠದ ಅಭಿಪ್ರಾಯವನ್ನು ತಳ್ಳಿಹಾಕಿರುವ ಶಾಲೆಗಳು, ತಾವು ರಾಜ್ಯ ಸರ್ಕಾರದಿಂದ ಯಾವುದೇ ಸವಲತ್ತು ಪಡೆಯುತ್ತಿಲ್ಲ ಎಂದು ಮೇಲ್ಮನವಿಯಲ್ಲಿ ತಿಳಿಸಿವೆ.
ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಿಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ನೋಟಿಸ್ ಜಾರಿಗೆ ಆದೇಶಿಸಿದೆಆದೇಶಿಸಿದೆ.
ಕೇಂದ್ರ ಸರ್ಕಾರದ ವಾದವನ್ನು ಏಕಸದಸ್ಯಪೀಠ ಆಲಿಸಿಲ್ಲ ಎಂದು ಆರೋಪಿಸಿರುವ ಈ ಶಾಲೆಗಳು, ಮೇಲ್ಮನವಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲಿಲ್ಲ ಎನ್ನುವುದು ಕುತೂಹಲದ ಅಂಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.