ಬೆಂಗಳೂರು: ಉನ್ನತಾಧಿಕಾರ ಹೊಂದಿರುವ `ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ'ಯ ಸ್ವರೂಪ ಮತ್ತು ಕಾರ್ಯವ್ಯಾಪ್ತಿ ವ್ಯಾಖ್ಯಾನಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಸಿದ್ಧಪಡಿಸಿದೆ.
ಈ ಮಂಡಳಿಗೆ ಸಾಂವಿಧಾನಿಕ ಮಾನ್ಯತೆ ಇರಲಿದೆ. `ಹೈ-ಕ' ಭಾಗದ ವಿವಿಧ ಪ್ರದೇಶಗಳಲ್ಲಿ ಅಭಿವೃದ್ಧಿಯಲ್ಲಿನ ತಾರತಮ್ಯ ಹೇಗಿದೆ, ಅವುಗಳನ್ನು ರಾಜ್ಯದ ಇನ್ನಿತರ ಭಾಗಗಳಿಗೆ ಸರಿಸಮಾನವಾಗಿ ಅಭಿವೃದ್ಧಿಪಡಿಸಲು ಅಗತ್ಯ ಇರುವ ಹಣಕಾಸಿನ ಮೊತ್ತ ಎಷ್ಟು ಎಂಬುದನ್ನು ಮಂಡಳಿ ಅಂದಾಜಿಸಬೇಕಿದೆ. ಮಂಡಳಿ ಮಾಡುವ ಶಿಫಾರಸುಗಳನ್ನು ಪರಿಶೀಲಿಸಿ, ಅದನ್ನು ವಾರ್ಷಿಕ ಬಜೆಟ್ ಪ್ರಸ್ತಾವನೆಯಲ್ಲಿ ಸೇರಿಸುವುದು ಸರ್ಕಾರಕ್ಕೆ ಕಡ್ಡಾಯ ಆಗಲಿದೆ.
ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಹೈ-ಕ ಭಾಗದ ಆರು ಜಿಲ್ಲೆಗಳಿಗೆ (ಗುಲ್ಬರ್ಗ, ಯಾದಗಿರಿ, ರಾಯಚೂರು, ಬೀದರ್, ಕೊಪ್ಪಳ ಮತ್ತು ಬಳ್ಳಾರಿ) ವಿಶೇಷ ಸ್ಥಾನಮಾನ ನೀಡಲು, ಸಂಸತ್ತು ಸಂವಿಧಾನಕ್ಕೆ ಇತ್ತೀಚೆಗೆ ತಿದ್ದುಪಡಿ ತಂದಿದೆ.
ಸರ್ಕಾರ ಸಿದ್ಧಪಡಿಸಿರುವ ಕರಡನ್ನು `ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಆದೇಶ - 2013' ಎಂದು ಕರೆಯಲಾಗಿದೆ. `ಪ್ರಜಾವಾಣಿ'ಗೆ ಲಭ್ಯವಾಗಿರುವ ಕರಡು ಪ್ರತಿಯಲ್ಲಿರುವಂತೆ, ಮಂಡಳಿಯಲ್ಲಿ ಒಟ್ಟು 13 ಸದಸ್ಯರು ಇರುತ್ತಾರೆ.
ಇದರಲ್ಲಿ ಆ ಭಾಗದ ಒಬ್ಬ ಸಂಸದ, ಮೂವರು ಶಾಸಕರು ಇರುತ್ತಾರೆ. ಸದಸ್ಯರನ್ನು ಸರ್ಕಾರವು ಎರಡು ವರ್ಷಗಳ ಅವಧಿಗೆ ನೇಮಕ ಮಾಡುತ್ತದೆ. ಹೈ-ಕ ಪ್ರದೇಶದ ಒಂದು ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರೂ ಮಂಡಳಿಯ ಸದಸ್ಯರಾಗಿರುತ್ತಾರೆ. ಯೋಜನೆ, ಹಣಕಾಸು, ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆ, ಕೃಷಿ ಮತ್ತು ಕೈಗಾರಿಕೆ, ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿ ಕ್ಷೇತ್ರಗಳ ತಜ್ಞರು ತಲಾ ಒಬ್ಬರು ಸದಸ್ಯರಾಗಿರುತ್ತಾರೆ.
ಈ ಭಾಗವು ಅಭಿವೃದ್ಧಿಯಲ್ಲಿ ಇತರ ಭಾಗಗಳಿಗೆ ಸಮಾನವಾಗಿ ನಿಲ್ಲುವಂತೆ ಮಾಡಲು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಪರಿಣಾಮ ಏನಾಗಿದೆ ಎಂಬುದನ್ನೂ ಈ ಮಂಡಳಿಯು ಅಂದಾಜಿಸಬೇಕಿದೆ. ಕರಡನ್ನು ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟದ ಮುಂದಿಡಲಾಗುತ್ತದೆ. ಮಂಡಳಿಯು ಮೂರು ತಿಂಗಳಿಗೆ ಒಮ್ಮೆ ಸಭೆ ಸೇರಬೇಕು.
ಹೈ-ಕ ಭಾಗದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಮೇಲೆ ನಿಗಾ ಇಡಲು ಅಧಿಕಾರಿಗಳ ಮಟ್ಟದ `ಅನುಷ್ಠಾನ ಸಮಿತಿ' ರಚನೆಯಾಗಲಿದೆ. ಮಂಡಳಿ ರಚನೆ ಆದ ನಂತರ, ಈಗ ಇರುವ `ಹೈದರಾಬಾದ್ - ಕರ್ನಾಟಕ ಅಭಿವೃದ್ಧಿ ಮಂಡಳಿ ಕಾಯ್ದೆ - 1991' ಅಸ್ತಿತ್ವ ಕಳೆದುಕೊಳ್ಳಲಿದೆ.
ಹೈ-ಕ ಭಾಗದವರಿಗೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ಸೌಲಭ್ಯ ನೀಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಈ ಭಾಗಕ್ಕೆ ದೊರೆತಿರುವ ವಿಶೇಷ ಸ್ಥಾನಮಾನ ಮತ್ತು ಸೌಲಭ್ಯಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಸಚಿವ ಸಂಪುಟದ ಉಪ ಸಮಿತಿ ಕೂಡ ರಚನೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.