ADVERTISEMENT

ಹೊತ್ತಿ ಉರಿದ ತಾಳೆ ಮರಗಳು

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:39 IST
Last Updated 3 ಮಾರ್ಚ್ 2018, 19:39 IST
ಬೆಂಕಿ ಆಕಸ್ಮಿಕದಿಂದಾಗಿ, ತಾಳೆವನ ಅರಣ್ಯ ಪ್ರದೇಶದಲ್ಲಿ ಶನಿವಾರ ಹೊತ್ತಿ ಉರಿದ ತಾಳೆಮರಗಳು  ಪ್ರಜಾವಾಣಿ ಚಿತ್ರ: ಎಚ್‌.ಎಸ್‌.ಶ್ರೀಹರಪ್ರಸಾದ್‌
ಬೆಂಕಿ ಆಕಸ್ಮಿಕದಿಂದಾಗಿ, ತಾಳೆವನ ಅರಣ್ಯ ಪ್ರದೇಶದಲ್ಲಿ ಶನಿವಾರ ಹೊತ್ತಿ ಉರಿದ ತಾಳೆಮರಗಳು ಪ್ರಜಾವಾಣಿ ಚಿತ್ರ: ಎಚ್‌.ಎಸ್‌.ಶ್ರೀಹರಪ್ರಸಾದ್‌   

ಮರಿಯಮ್ಮನಹಳ್ಳಿ (ಬಳ್ಳಾರಿ ಜಿಲ್ಲೆ): ಸಮೀಪದ ಚಿಲಕನಹಟ್ಟಿ ಉಪ ವಲಯ ವ್ಯಾಪ್ತಿಯ ತಾಳೆವನ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ತಾಳೆ ಮರಗಳು ಸುಟ್ಟುಹೋಗಿವೆ.

ಇಲ್ಲಿನ ಮೊಲ, ಕಾಡು ಹಂದಿ, ನವಿಲು ಸೇರಿದಂತೆ ಇತರ ಪ್ರಾಣಿ ಪಕ್ಷಿಗಳು ಸಂಕಷ್ಟಕ್ಕೀಡಾಗಿವೆ.

ಬೆಳಿಗ್ಗೆ 10ಗಂಟೆ ಸುಮಾರಿಗೆ ತಾಳೆವನದ ದಕ್ಷಿಣ ದಿಕ್ಕಿನಲ್ಲಿ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ, ಕ್ರಮೇಣ ಸುತ್ತಮುತ್ತ ವ್ಯಾಪಿಸಿತು. ಬಲವಾಗಿ ಬೀಸುತ್ತಿದ್ದ ಗಾಳಿಯಿಂದಾಗಿ ಏಕಕಾಲಕ್ಕೆ ಹಲವಾರು ಮರಗಳು ಹೊತ್ತಿ ಉರಿದವು. ಇದನ್ನು ಕಂಡು ಕಂಗಾಲಾದ ಅರಣ್ಯ ಇಲಾಖೆಯ ನೂರಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಗ್ರಾಮಸ್ಥರು ಬೆಂಕಿಯನ್ನು ನಿಯಂತ್ರಿಸಲಾಗದೇ ಕೈಚೆಲ್ಲಬೇಕಾಯಿತು.

ADVERTISEMENT

ಹೊಸಪೇಟೆ ಹಾಗೂ ಹಗರಿಬೊಮ್ಮನಹಳ್ಳಿಯಿಂದ ಬಂದ ಎರಡು ಅಗ್ನಿ ಶಾಮಕ ವಾಹನ ಹಾಗೂ ತುರ್ತು ಸೇವೆಗಳ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾದರು. ಸಂಜೆ ನಾಲ್ಕರ ವೇಳೆ ಬೆಂಕಿ ತುಸು ತಹಬಂದಿಗೆ ಬಂದಿತು. ಕಾರ್ಯಾಚರಣೆ ಮುಂದುವರಿದಿದೆ.

‘ಇದು ರಾಜ್ಯದ ಏಕೈಕ ತಾಳೆವನ. 720 ಎಕರೆ ಇದೆ. 15 ಸಾವಿರಕ್ಕೂ ಹೆಚ್ಚು ತಾಳೆ ಮರಗಳಿವೆ. ಬೆಂಕಿ ಅವಘಡದಿಂದ 20 ಎಕರೆ ಪ್ರದೇಶಕ್ಕೆ ಹಾನಿಯಾಗಿದೆ. ಈ ಹಿಂದೆಯೂ ಇದೇ ರೀತಿ ಆಗಿತ್ತು’ ಎಂದು ಚಿಲಕನಹಟ್ಟಿ ಅರಣ್ಯಾಧಿಕಾರಿ ಮುನಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.