ADVERTISEMENT

ಹೊಸದಾಗಿ 11 ವಾರ್ಡ್ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 19:35 IST
Last Updated 25 ಮೇ 2018, 19:35 IST
ಪಾಲಿಕೆ ಸಾಂದರ್ಭಿಕ ಚಿತ್ರ
ಪಾಲಿಕೆ ಸಾಂದರ್ಭಿಕ ಚಿತ್ರ   

ಮೈಸೂರು: ವಿಧಾನಸಭಾ ಚುನಾವಣೆಯ ಅಬ್ಬರ ಕೊನೆಗೊಂಡು ನಿಟ್ಟುಸಿರುಬಿಡುವ ಹೊತ್ತಿಗೆ ಮೈಸೂರಿನ ಜನರು ಮತ್ತೊಂದು ಚುನಾವಣೆಗೆ ಸಜ್ಜಾಗಬೇಕಿದೆ. ಮೈಸೂರು ಮಹಾನಗರ ಪಾಲಿಕೆಯ ಹಾಲಿ ಕೌನ್ಸಿಲ್‌ನ ಅವಧಿ ಸೆಪ್ಟೆಂಬರ್‌ನಲ್ಲಿ ಕೊನೆಗೊಳ್ಳಲಿದ್ದು, 2–3 ತಿಂಗಳಲ್ಲಿ ಚುನಾವಣೆ ನಡೆಯಲಿದೆ.

ಚುನಾವಣೆಗೆ ಸಿದ್ಧತೆ ಎನ್ನುವಂತೆ ನಗರಾಭಿವೃದ್ಧಿ ಸಚಿವಾಲಯ ಪಾಲಿಕೆಯ ವಾರ್ಡ್‌ಗಳ ಮರುವಿಂಗಡಣೆ ಮಾಡಿ ಈಗಾಗಲೇ ಅಧಿಸೂಚನೆಯನ್ನು ಹೊರಡಿಸಿದೆ. ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಕಾಯ್ದೆ–1976ರ ಅನ್ವಯ ಮರುವಿಂಗಡನೆ ಕಾರ್ಯ ನಡೆದಿದೆ.

ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ಗಳ ಮರುವಿಂಗಡಣೆ ಮಾಡಲಾಗಿದೆ. ಆದರೆ ಒಟ್ಟು ವಾರ್ಡ್‌ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಈಗ ಇರುವಂತೆ ಒಟ್ಟು 65 ವಾರ್ಡ್‌ಗಳೇ ಇರಲಿದ್ದು, ಕೆಲವು ವಾರ್ಡ್‌ಗಳ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಬದಲಾವಣೆ ಉಂಟಾಗಿದೆ. ಅಧಿಸೂಚನೆಗೆ ಯಾವುದೇ ಆಕ್ಷೇಪ ವ್ಯಕ್ತವಾಗದಿದ್ದರೆ ಮರುವಿಂಗಡಣೆ ಅಂತಿಮಗೊಳ್ಳಲಿದೆ.

ADVERTISEMENT

ಹೊಸ ಪ್ರದೇಶಗಳು ಸೇರ್ಪಡೆ: ಪಾಲಿಕೆ ವ್ಯಾಪ್ತಿಗೆ ಕೆಲವು ಹೊಸ ಪ್ರದೇಶಗಳನ್ನು ಸೇರಿಸಲಾಗಿದೆ. ಈ ಹಿಂದೆ ಇದ್ದ ಕೆಲವು ವಾರ್ಡ್‌ಗಳನ್ನು ಕೈಬಿಟ್ಟು, ಅಕ್ಕಪಕ್ಕದ ವಾರ್ಡ್‌ಗಳ ಜತೆ ವಿಲೀನಗೊಳಿಸಲಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಮುಡಾದಿಂದ ಹಲವು ಬಡಾವಣೆಗಳು ಪಾಲಿಕೆಗೆ ಹಸ್ತಾಂತರಗೊಂಡಿದ್ದು, ಆ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಿ ವಾರ್ಡ್‌ಗಳ ಮರುವಿಂಗಡಣೆ ಮಾಡಲಾಗಿದೆ.

ಹಾಲಿ ಇರುವ 65 ವಾರ್ಡ್‌ಗಳಲ್ಲಿ 11 ವಾರ್ಡ್‌ಗಳನ್ನು ಕೈಬಿಟ್ಟು, ಹೊಸದಾಗಿ 11 ವಾರ್ಡ್‌ಗಳನ್ನು ರಚಿಸಲಾಗಿದೆ. ವಿವೇಕಾನಂದ ನಗರ (15), ಸರಸ್ವತಿಪುರಂ (20), ಬೃಂದಾವನ ಬಡಾವಣೆ (30), ಒಂಟಿಕೊಪ್ಪಲು (32), ಮೇದಾರ ಬ್ಲಾಕ್‌ (34), ಕೈಲಾಸಪುರಂ (39), ಬಿ.ಬಿ.ಕೇರಿ (42), ಸತ್ಯನಗರ (51), ವಿದ್ಯಾನಗರ (57), ಸಿದ್ದಾರ್ಥ ನಗರ (63) ಮತ್ತು ನಜರಾಬಾದ್‌ (64) ವಾರ್ಡ್‌ಗಳನ್ನು ಕೈಬಿಟ್ಟು, ಅಕ್ಕಪಕ್ಕದ ವಾರ್ಡ್‌ಗಳ ಜತೆ ವಿಲೀನಗೊಳಿಸಲಾಗಿದೆ.

ವಾರ್ಡ್‌ಗಳ ಮರುವಿಂಗಡಣೆಯಿಂದಾಗಿ ಈಗ ಇದ್ದ ವಾರ್ಡ್‌ಗಳ ಸಂಖ್ಯೆಗಳು ಕೂಡಾ ಸಂಪೂರ್ಣವಾಗಿ ಬದಲಾಗಲಿದೆ. ಈಗ ಇರುವ ಪಟ್ಟಿಯ ಪ್ರಕಾರ ಅಗ್ರಹಾರ 1ನೇ ವಾರ್ಡ್‌ ಆಗಿದೆ. ಆದರೆ ಮರುವಿಂಗಡಣೆ ಬಳಿಕ ಹೆಬ್ಬಾಳು ಲಕ್ಷ್ಮೀಕಾಂತ ನಗರ 1ನೇ ವಾರ್ಡ್‌ ಎನಿಸಿಕೊಳ್ಳಲಿದೆ. ಶ್ರೀರಾಂಪುರ ವಾರ್ಡ್‌ (65) ಕೊನೆಯ ವಾರ್ಡ್‌ ಆಗಲಿದೆ.

ಕುವೆಂಪುನಗರದಲ್ಲಿ ಹಾಲಿ ಇರುವ ಮೂರು ವಾರ್ಡ್‌ಗಳಿಗೆ ಕುವೆಂಪುನಗರ ಸಿಐಟಿಬಿ, ಕುವೆಂಪುನಗರ ‘ಎಂ’ ಬ್ಲಾಕ್‌ ಮತ್ತು ಕುವೆಂಪುನಗರ ಎಂದು ಹೊಸದಾಗಿ ಹೆಸರಿಡಲಾಗಿದೆ. ‌

ಹೊಸ ವಾರ್ಡ್‌ಗಳು

ಮಹದೇಶ್ವರ ಬಡಾವಣೆ (2), ಯಾದವಗಿರಿ (18), ಗಂಗೋತ್ರಿ ವಾರ್ಡ್‌ (22), ಅಜೀಜ್‌ ಸೇಠ್‌ ನಗರ (33), ಸಾತಗಳ್ಳಿ ಒಂದನೇ ಹಂತ (35), ಅಂಬೇಡ್ಕರ್‌ ಕಾಲನಿ (36), ಗಿರಿಯಾ ಬೋವಿ ಪಾಳ್ಯ (38), ಟಿ.ಕೆ.ಬಡಾವಣೆ (43), ಜನತಾನಗರ (44), ದಟ್ಟಗಳ್ಳಿ (46), ಗೌಸಿಯಾ ನಗರ ‘ಎ’ ಬ್ಲಾಕ್‌ ಉಸ್ಮಾನಿಯಾ (32) ವಾರ್ಡ್‌ಗಳನ್ನು ಹೊಸದಾಗಿ ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.