ಹುಬ್ಬಳ್ಳಿ: ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಅವರನ್ನು ಹತ್ಯೆಗೈದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸದಿದ್ದರೆ ಕನ್ನಡ ಸಾಹಿತ್ಯ ಪರಿಷತ್ ನೀಡಿದ್ದ 2010ನೇ ಸಾಲಿನ ಬೆಂಗಳೂರು ಮಹಾನಗರ ಸಾರಿಗೆ ನಿಗಮದ ‘ಅರಳು ಸಾಹಿತ್ಯ ಪ್ರಶಸ್ತಿ’ಯನ್ನು ಗಾಂಧಿ ಜಯಂತಿ ಯಂದು ಹಿಂತಿರುಗಿಸಲು 6 ಮಂದಿ ಸಾಹಿತಿಗಳು ನಿರ್ಧರಿಸಿದ್ದಾರೆ.
ಬೆಳಗಾವಿಯ ವೀರಣ್ಣ ಮಡಿವಾಳರ, ಮಂಡ್ಯದ ಟಿ. ಸತೀಶ್ ಜವರೇಗೌಡ, ಧಾರವಾಡದ ಸಂಗಮೇಶ ಮೆಣಸಿನಕಾಯಿ, ಉತ್ತರ ಕನ್ನಡದ ಹನಮಂತ ಹಾಲಿಗೇರಿ, ಬಳ್ಳಾರಿಯ ಶ್ರೀದೇವಿ ವಿ. ಆಲೂರ ಹಾಗೂ ರಾಯಚೂರಿನ ಚಿದಾನಂದ ಸಾಲಿ ಪ್ರಶಸ್ತಿ ವಾಪಸು ಮಾಡಲು ನಿರ್ಧರಿಸಿದ್ದಾರೆ.
2011 ನವೆಂಬರ್ 22ರಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ‘ಬೆಂಗಳೂರು ಮಹಾನಗರ ಸಾರಿಗೆ ನಿಗಮದ ಅರಳು ಪ್ರಶಸ್ತಿ’ಯನ್ನು ಕಲಬುರ್ಗಿ ಅವರ ಸಮ್ಮುಖದಲ್ಲಿ ಈ ಆರು ಮಂದಿ ಸಾಹಿತಿಗಳು ಸ್ವೀಕರಿಸಿದ್ದರು. ಅದೇ ವೇದಿಕೆಯಲ್ಲಿ ಕಲಬುರ್ಗಿ ಅವರಿಗೆ ‘ನೃಪತುಂಗ ಪ್ರಶಸ್ತಿ’ ನೀಡಿ ಗೌರವಿಸಲಾಗಿತ್ತು.
‘ವಸ್ತುನಿಷ್ಠ ಸಂಶೋಧಕ ಹಾಗೂ ವಿದ್ವಾಂಸರಾದ ಕಲಬುರ್ಗಿಯವರ ಹತ್ಯೆಯಿಂದ ನಾಡಿನ ಜನ ದಿಗ್ಭ್ರಮೆಗೊಳಗಾಗಿದ್ದಾರೆ. ಅದರಲ್ಲಿ ನಾವೂ ಸೇರಿದ್ದೇವೆ. ಈಗಾಗಲೇ ಮಹಾರಾಷ್ಟ್ರದ ಹೋರಾಟಗಾರರಾದ ನರೇಂದ್ರ ದಾಭೋಲ್ಕರ್, ಗೋವಿಂದರಾವ್ ಪನ್ಸಾರೆ ಅವರನ್ನು ಹತ್ಯೆಗೈದ ದುಷ್ಕರ್ಮಿಗಳ ಪತ್ತೆ ಇನ್ನೂ ಆಗಿಲ್ಲ. ಕಲಬುರ್ಗಿ ಅವರ ಪ್ರಕರಣವೂ ದೀರ್ಘಕಾಲ ರಹಸ್ಯವಾಗಿ ಉಳಿಯಬಾರದುಎಂಬುದು ನಮ್ಮ ಒತ್ತಾಯ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಕಲಬುರ್ಗಿ ಅವರ ಹತ್ಯೆ ಕುರಿತು ನಾನಾ ವದಂತಿಗಳು ಹರಡುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನಿಖೆಯನ್ನು ತೀವ್ರಗೊಳಿಸಬೇಕು. ಸರ್ಕಾರದ ಅಧೀನದಲ್ಲಿರುವ ಸಿಐಡಿಯಿಂದ ತನಿಖೆ ತೀವ್ರಗೊಳ್ಳುವ ಭರವಸೆ ನಮಗಿಲ್ಲ. ಇದೇ 30ರ ಒಳಗೆ ಸರ್ಕಾರ ದುಷ್ಕರ್ಮಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕು. ಸರ್ಕಾರ ಸಿಬಿಐಗೆ ವಹಿಸುವ ನಿರ್ಧಾರಕ್ಕೆ ಬರದಿದ್ದರೆ ‘ಅರಳು ಪ್ರಶಸ್ತಿ’ಯನ್ನು ಗಾಂಧಿ ಜಯಂತಿಯಂದೇ ನಾವು ವಾಸಿ ಸುವ ಜಿಲ್ಲೆ/ತಾಲೂಕು ಘಟಕಗಳ ಕಸಾಪ ಅಧ್ಯಕ್ಷರಿಗೆ ಹಿಂತಿರುಗಿಸುವ ಮೂಲಕ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದ್ದಾರೆ.
‘ನಮ್ಮ ಈ ನಿರ್ಧಾರದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಬೇಸರಪಡಬೇಕಿಲ್ಲ. ನಮಗೆ ಕಸಾಪದ ಬಗ್ಗೆ ಯಾವುದೇ ಅಸಮಾಧಾನ ಇಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಸಾಹಿತ್ಯ ಪರಿಷತ್‌ನ ಪರಂಪರೆ, ಚಟುವಟಿಕೆಗಳ ಬಗ್ಗೆ ಹೆಮ್ಮೆ ಇದೆ. ಕ.ಸಾ.ಪ. ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ನಾವು ಈ ಸಾಂಕೇತಿಕ ಪ್ರತಿಭಟನೆಯ ನಿರ್ಧಾರಕ್ಕೆ ಬಂದಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.