ಧಾರವಾಡ: ಹಳ್ಳಿಯಲ್ಲಿರುವ ಬಡವರು ಉದ್ಯೋಗ ಹುಡುಕಿಕೊಂಡು ಗೊತ್ತಿಲ್ಲದ ಮಹಾನಗರಗಳಿಗೆ ಗುಳೆ ಹೋಗುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ‘ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ’ಯನ್ನು ತಂದಿದೆ. ಆದರೆ, ಈ ಯೋಜನೆ ಊಹಿಸಲೂ ಆಗದಷ್ಟು ದುರುಪಯೋಗವಾಗಿದ್ದನ್ನು ನೋಡಲು ಕಲಘಟಗಿ ತಾಲ್ಲೂಕಿನ ಜಿನ್ನೂರು ಗ್ರಾಮ ಪಂಚಾಯ್ತಿಗೆ ಬರಬೇಕು.
ಜಿನ್ನೂರು ಪಂಚಾಯ್ತಿ ಕಚೇರಿ ಎದುರಿನ ಚಿಕ್ಕ ಮನೆಯಲ್ಲಿರುವ ಶಿವರುದ್ರಪ್ಪ ಸಣ್ಣಗೌಡ್ರ ಅವರ ಹೆಸರಿನಲ್ಲಿ ಪಂಚಾಯ್ತಿಯವರು ‘ಜಾಬ್ ಕಾರ್ಡ್’ ವಿತರಣೆ ಮಾಡಿದ್ದಾರೆ. ತಮ್ಮ ಹೆಸರಿನಲ್ಲಿ ಕಾರ್ಡ್ ಇರುವುದು ಸ್ವತಃ ಗೌಡರಿಗೇ ಗೊತ್ತಿರಲಿಲ್ಲ. ಅವರು ‘ಕೂಲಿ’ಯಿಂದ ಗಳಿಸಿದ ಹಣವನ್ನು ಬ್ಯಾಂಕ್ ಖಾತೆಗೆ ಹಾಕಲು ಅವರ ಮಗ ಪ್ರಭಾಕರನ ಹೆಸರಿನಲ್ಲಿ ಖಾತೆ ತೆರೆಯಲಾಗಿದೆ. ಆ ಖಾತೆಗೆ ಎಟಿಎಂ ಕಾರ್ಡನ್ನೂ ಪಡೆಯಲಾಗಿದೆ. ಆದರೆ, ಮಗ ಊರು ಬಿಟ್ಟು ಒಂದು ವರ್ಷವಾಯಿತು. ಇನ್ನೂ ವಾಪಸಾಗಿಲ್ಲ. ಗೌಡರ ಜಾಬ್ ಕಾರ್ಡ್, ಮಗನ ಬ್ಯಾಂಕ್ ಪಾಸ್ ಬುಕ್, ಎಟಿಎಂ ಕಾರ್ಡ್ ಪಂಚಾಯ್ತಿಯ ಮಾಜಿ ಅಧ್ಯಕ್ಷರೊಬ್ಬರ ಬಳಿ ಇದೆ. ಅವರೇ ಹಣವನ್ನು ಡ್ರಾ ಮಾಡಿಕೊಂಡು ಸ್ವಂತಕ್ಕೆ ಬಳಸುತ್ತಿದ್ದಾರೆ ಎಂದು ಗೌಡರು ಆರೋಪಿಸುತ್ತಾರೆ.
‘ಆ ಮಾಜಿ ಚೇರ್ಮನ್‌ನ ಭಾನಗಡಿಯನ್ನು ಯಾರ ಬಳಿ ಬಂದು ಹೇಳೆಂದರೂ ಹೇಳ್ತಿನಿ. ಇಂತಹ ಎಷ್ಟೋ ಕಾರ್ಡುಗಳು ಅವರ ಬಳಿ ಇವೆ. ಕಾರ್ಡುಗಳನ್ನು ಅವರೇ ತೆಗೆಸಿ, ಕೆಲಸ ಮಾಡಿಸಿದೆ ಎಂದು ಪಂಚಾಯ್ತಿಯಲ್ಲಿ ಬರೆಸಿ ಹಣ ಹೊಡೆಯುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೊಂದು ಪ್ರಕರಣ ಇದಕ್ಕಿಂತ ವಿಚಿತ್ರ. ಗ್ರಾಮದ ಮಂಜುನಾಥ ನೇರ್ತಿ ಅವರಿಗೆ ಸಹಿ ಮಾಡಲು ಬರುವುದೇ ಇಲ್ಲ. ಆದರೆ, ಅವರ ಬ್ಯಾಂಕ್ ಖಾತೆ ಕಲಘಟಗಿಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ಇದೆ. ‘ಪಂಚಾಯ್ತಿಯವರು ನರೇಗಾ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಿರುತ್ತಾರೆ’ ಎಂದು ಮಂಜುನಾಥ ಹಣ ತೆಗೆಯಲು ಹೋದರೆ, ಬ್ಯಾಂಕ್ ವ್ಯವಸ್ಥಾಪಕಿ ಕೂಲಿ ಹಣ ಕೊಡಲು ನಿರಾಕರಿಸುತ್ತಾರೆ.
‘ನಿಮ್ಮ ಖಾತೆ ಆರಂಭವಾಗುವಾಗ ನಿಮ್ಮೊಂದಿಗೆ ಬಂದವರನ್ನು (ಆತ ಗ್ರಾಮದ ಇನ್ನೊಬ್ಬ ಪ್ರಭಾವಿ ಮುಖಂಡ) ಕರೆದುಕೊಂಡು ಬನ್ನಿ’ ಎನ್ನುತ್ತಾರೆ ವ್ಯವಸ್ಥಾಪಕಿ. ಏಕೆಂದರೆ, ಈ ಖಾತೆ ಆರಂಭವಾಗುವಾಗ ಸಹಿ ಮಾಡಿದ ವ್ಯಕ್ತಿ ಅವರೇ!
ಖಾತೆದಾರನೇ ಖುದ್ದು ಎದುರಿಗೆ ಇದ್ದರೂ ಖಾತೆಯಲ್ಲಿನ ಹಣ ಕೊಡಲು ನಿರಾಕರಿಸಿದ ವ್ಯವಸ್ಥಾಪಕಿ ವಿರುದ್ಧ ಮಂಜುನಾಥ ಲೀಡ್ ಬ್ಯಾಂಕ್ ಮ್ಯಾನೇಜರ್ ಬಸವರಾಜ ಹೂಗಾರ ಅವರಿಗೆ ಕಳೆದ ಮಾರ್ಚ್ 3ರಂದು ದೂರು ನೀಡಿದ್ದಾರೆ. ಇಲ್ಲಿಯವರೆಗೂ ವ್ಯವಸ್ಥಾಪಕಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಗ್ರಾಮದ ಮಹಾದೇವಪ್ಪ ಹುಣಸಿಮರದ, ಯಲ್ಲಮ್ಮ ಸುಣಗಾರ ಅವರ ಕಥೆಯೂ ಇದಕ್ಕಿಂತ ಭಿನ್ನವಿಲ್ಲ. ‘ಜಿನ್ನೂರು, ಮಲಕನಕೊಪ್ಪ, ದ್ವಾವನಕೊಂಡ ಗ್ರಾಮಗಳ ವ್ಯಾಪ್ತಿ ಹೊಂದಿರುವ ಜಿನ್ನೂರು ಗ್ರಾ.ಪಂ.ನಲ್ಲಿ 1360 ‘ಜಾಬ್ ಕಾರ್ಡ್’ಗಳನ್ನು ವಿತರಿಸಲಾಗಿದೆ. ಅದರಲ್ಲಿ 190 ‘ಜಾಬ್ಕಾರ್ಡ್’ದಾರರು 100 ದಿನಗಳನ್ನು ಪೂರೈಸಿದ್ದಾರೆ. ಆದರೆ, ಇವರಲ್ಲಿ ಯಾರಿಗೂ ತಮ್ಮ ಹೆಸರಿನಲ್ಲಿ ‘ಜಾಬ್ ಕಾರ್ಡ್’ ಇದೆ ಎಂಬುದೇ ಗೊತ್ತಿಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.