ಭಾರತೀಸುತ ವೇದಿಕೆ (ಮಡಿಕೇರಿ): ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಸಾಹಿತಿಗಳ ಮೊಗಸಾಲೆಯಾಗಬೇಕು. ಬೆಂಗಳೂರಿಗೆ ಹೋದ ಎಲ್ಲ ಸಾಹಿತಿಗಳೂ ಪರಿಷತ್ ಕಚೇರಿಗೆ ಭೇಟಿ ನೀಡಬೇಕು ಎಂದು ಪ್ರೊ.ಜಿ.ಅಶ್ವತ್ಥನಾರಾಯಣ ಹೇಳಿದರು.
ಇಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2ನೇ ದಿನವಾದ ಬುಧವಾರ ‘ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು ಹಿಂದೆ ಸಾಹಿತ್ಯ ಪರಿಷತ್ ಕಚೇರಿ ಸಾಹಿತಿಗಳ ಮೊಗಸಾಲೆಯಾಗಿತ್ತು. ದೊಡ್ಡ ದೊಡ್ಡ ಸಾಹಿತಿಗಳು ಅಲ್ಲಿ ಬಂದು ಚರ್ಚೆ ನಡೆಸುತ್ತಿದ್ದರು. ಈಗ ಅಲ್ಲಿಗೆ ಯಾವುದೇ ಸಾಹಿತಿಗಳೂ ಹೋಗುತ್ತಿಲ್ಲ. ಇದಕ್ಕೆ ಸಾಹಿತ್ಯ ಪರಿಷತ್ ಕಾರಣವಲ್ಲ. ಈಗಿನ ಸಾಹಿತಿಗಳ ಮನೋಭಾವ ಕಾರಣ ಎಂದು ಹೇಳಿದರು.
ಗಮಕ, ಜಾನಪದ, ಭಾಷಣ ಕಲೆ ಕಲಿಸುವ ತರಗತಿ, ನಿಘಂಟು ಕಾರ್ಯ ಎಲ್ಲವನ್ನೂ ಪರಿಷತ್ ನಿಲ್ಲಿಸಿದೆ. ಅವುಗಳನ್ನು ಪುನರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಕನ್ನಡ ಭಾಷಾಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ ಕೊಡುಗೆ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ ಡಾ.ಪಿ.ವಿ.ನಾರಾಯಣ, ಪರಿಷತ್ ಅಧ್ಯಕ್ಷರು ಪರಿಷತ್ ಮುಚ್ಚುವ ಮಾತನ್ನು ಆಡಬಾರದು. ಪರಿಷತ್‌ನ್ನು ಹ್ಯಾಗೆ ಮುಚ್ಚುತ್ತೀರಿ ಎಂದು ಸರ್ಕಾರಕ್ಕೆ ಸವಾಲು ಹಾಕಬೇಕು ಎಂದರು.
ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕಾರಣಿಗಳು ವೇದಿಕೆಯ ಕೆಳಗೆ ಕುಳಿತು ಸಾಹಿತಿಗಳು ಆಡುವ ಮಾತನ್ನು ಕೇಳಿಸಿಕೊಳ್ಳಬೇಕು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ 2008ರಲ್ಲಿಯೇ ಸಿಕ್ಕಿದೆ. ಇನ್ನೂ ಕನ್ನಡದ ಅತ್ಯುನ್ನತ ಅಧ್ಯಯನ ಕೇಂದ್ರವನ್ನು ತೆರೆದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸು ಮಾಡಿ ಪ್ರಧಾನಿ ಅವರ ಜೊತೆ ಮಾತನಾಡಿದರೆ ತಕ್ಷಣವೇ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆಶಯ ಭಾಷಣ ಮಾಡಿದ ಡಾ.ಬಸವಲಿಂಗ ಪಟ್ಟದ್ದೇವರು ಕನ್ನಡ ಹೃದಯದ ಭಾಷೆಯಾಗಬೇಕು. ಅನ್ನದ ಭಾಷೆಯಾಗಬೇಕು. ಅಲ್ಪಸಂಖ್ಯಾತರಿಗೆ ಕನ್ನಡ ಸಾಹಿತ್ಯದ ಅರಿವು ಮೂಡಿಸಬೇಕು ಎಂದು ಹೇಳಿದರು. ಡಾ.ಎಂ.ಎಲ್.ಶಂಕರಲಿಂಗಪ್ಪ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧನೆ ಬಗ್ಗೆ ಪ್ರಬಂಧ ಮಂಡಿಸಿದರು.
ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದ ಮೊದಲ ಅಧ್ಯಕ್ಷ!
1915ರಲ್ಲಿ ನಡೆದ ಮೊದಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಂಜುಂಡಯ್ಯ ಅವರು ಅಧ್ಯಕ್ಷ ಭಾಷಣವನ್ನು ಇಂಗ್ಲಿಷ್‌ನಲ್ಲಿ ಮಾಡಿದ್ದರು!
ಆಗ ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಅದಕ್ಕೆ ‘ನಾನು ಆಡಿದ ಮಾತುಗಳು ಬ್ರಿಟಿಷರಿಗೂ ತಿಳಿಯಲಿ, ನಮ್ಮ ಬೇಡಿಕೆಗೆ ಅವರು ಸ್ಪಂದಿಸಲಿ ಎಂದು ಇಂಗ್ಲಿಷ್‌ನಲ್ಲಿ ಮಾತನಾಡಿದೆ’ ಎಂದು ನಂಜುಂಡಯ್ಯ ಸಮರ್ಥಿಸಿಕೊಂಡಿದ್ದರು. ಈ ಮಾಹಿತಿಯನ್ನು ನೀಡಿದ ಪ್ರೊ.ಜಿ.ಅಶ್ವತ್ಥನಾರಾಯಣ ಸರ್ಕಾರದ ಮುಂದೆ ಕೈಚಾಚುವ ಗುಣ ಮೊದಲ ಸಮ್ಮೇಳನದಿಂದಲೇ ಚಾಲ್ತಿಗೆ ಬಂದಿದೆ ಎಂದರು. ನಂಜುಂಡಯ್ಯ ಅವರು 3 ಬಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂಬ ವಿಷಯವನ್ನೂ ಅವರು ತಿಳಿಸಿದರು.
ಪದ್ಯದಲ್ಲಿಯೇ ವರದಿ!
ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ವರದಿಯನ್ನು ಹುಯಿಲಗೋಳ ನಾರಾಯಣರಾಯರು 50 ಪದ್ಯಗಳಲ್ಲಿ ಬರೆದಿದ್ದಾರೆ. ಅದರ ಕೆಲವು ತುಣುಕುಗಳನ್ನೂ ಅಶ್ವತ್ಥನಾರಾಯಣ ಓದಿದರು. ಅವು ಹೀಗಿವೆ.
ಹೇವದಿಂ ಪುಟ್ಟಿರ್ದು ಸುಡುತಿರುವ ವಿಷವ ನುಂಗಲ್ಕೆ
ನಂಜುಂಡಯ್ಯ ಎಲ್ಲದಲೆ ಆವನಿವ ಎಂದು
ಮನದಲಿ ಭಾವಿಸಿ ಈಪರಿಯಿಂದಲೆ
ಅವರನು ಸೇವಿಸುತ
ಬೆಸಗೊಳಲ್ಕೆ ಒಪ್ಪಿದರಯ್ಯ ಕರುಣದಲಿ.
ಇದಿರುಗೊಳ್ಳುತ ಪ್ರೇಮದಿಂದಲಿ
ಮೊದಲೊಳ್ ಏರ್ಪಡಿಸಿದ ತಾಣಕೆ
ಕುದುರೆ ಬಂಡಿಗಳಲಿ ಕರೆದೊಯ್ದು
ಇಳಿಸಿದರು ಬಿಡದೆ
ಬಂದ ಜನಗಳಿಗಂದು ಚಹವನು ತಂದು ಕುಡಿಯಲ್ಕೆ
ಎಂದು ಕೊಡುವರು
ಮುಂದೆ ವಿಶ್ರಮಕೆಂದು ತುಸು ಕಾಲವನು ಬಿಡುತಿಹರು
ಮಿಂದು ಬರೆ 11 ಗಂಟೆಗೆ
ಚಂದದೂಟವನಿಂದು ಮಾಡಿಸುವ ಅಂದದಿ
ಪರಿಯಿಂದ ಸತ್ಕರಿಸುವರು ಪ್ರತಿ ದಿನದಿ
*ಸಮ್ಮೇಳನದ ಸ್ವಾರಸ್ಯಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.