
ಧಾರವಾಡ: ‘ಇದು ನನ್ನ ಕೊನೆಯ ಕೃತಿ. ಇದು ಪೂರ್ಣಗೊಂಡಮೇಲೆ ನಾನು ಬದುಕುವುದಿಲ್ಲ. ಆದ್ದರಿಂದ ಅತ್ಯಂತ ಅದ್ಭುತವಾದ ಸಾಹಿತ್ಯ ಸೃಷ್ಟಿ ಮಾಡಬೇಕು ಎಂದು ಲೇಖಕನೊಬ್ಬ ನಿರ್ಧರಿಸಿ, ತನ್ನ ಜೀವದ್ರವ್ಯವನ್ನು ಧಾರೆ ಯೆರೆದು ಬರೆದಾಗಲೇ ಉತ್ತಮ ಕೃತಿ ರಚನೆ ಸಾಧ್ಯವಾಗುತ್ತದೆ’ ಎಂದು ಹಿರಿಯ ವಿಮರ್ಶಕ ಡಾ.ಟಿ.ಪಿ.ಅಶೋಕ ಹೇಳಿದರು.
ಮನೋಹರ ಗ್ರಂಥಮಾಲೆಯ 81ನೇ ವರ್ಷದ ಕೃತಿಗಳಾದ ಹಿರಿಯ ವಿಮರ್ಶಕ ಡಾ.ಜಿ.ಎಸ್.ಆಮೂರರ ‘ಯು.ಆರ್. ಅನಂತಮೂರ್ತಿ ವೈಚಾರಿಕತೆ ಮತ್ತು ಸಾಹಿತ್ಯ’, ರಜನಿ ನರಹಳ್ಳಿ ಅವರ ‘ಆತ್ಮವೃತ್ತಾಂತ’ ಕಾದಂಬರಿ, ಶ್ರೀನಿವಾಸ ವೈದ್ಯ ಅವರ ಅನುವಾದಿತ ಕಾದಂಬರಿ ‘ಕರ್ನಲ್‌ನಿಗೆ ಯಾರೂ ಬರೆಯುವುದೇ ಇಲ್ಲ’, ಪ್ರಕಾಶ ಗರುಡರ ‘ಬೆತ್ತಲಾಟ’ ನಾಟಕ ಮತ್ತು ಬಸು ಬೇವಿನಗಿಡದ ಅವರ ಕಥಾ ಸಂಕಲನ ‘ಹೊಡಿ ಚಕ್ಕಡಿ’ ಹಾಗೂ ಡಾ.ಗಿರಡ್ಡಿ ಗೋವಿಂದರಾಜರ ‘ವಚನ ವಿನ್ಯಾಸ’ ವಿಮರ್ಶೆ (ಮರುಮುದ್ರಣ) ಹಾಗೂ ಆರ್ಯ ಆಚಾರ್ಯ ಅನುವಾದಿಸಿದ ‘ಷಡ್ದರ್ಶನ ಸಮುಚ್ಚಯ’ ಕೃತಿಗಳನ್ನು ಭಾನುವಾರ ನಗರದಲ್ಲಿ ಬಿಡುಗಡೆ ಮಾಡಿ ಮಾತನಾಡಿದರು.
‘ಇಂಗ್ಲಿಷ್ ಲೇಖಕ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಗಟ್ಟಿ ಲೇಖಕ. ವೃತ್ತಿಯಲ್ಲಿ ಪತ್ರಕರ್ತರೂ ಆಗಿದ್ದ ಮಾರ್ಕ್ವೆಜ್, ನಿತ್ಯವೂ ತಮ್ಮ ಸುತ್ತ ನಡೆಯುತ್ತಿದ್ದ ಸಂಗತಿಗಳನ್ನು ವರದಿ ಮಾಡುತ್ತಲೇ ಆ ಸಂಗತಿಗೆ ತಾವೂ ಸಾಕ್ಷಿಯಾಗುತ್ತಿದ್ದರು. ಅದ್ಭುತವಾದದ್ದನ್ನು ಸೃಷ್ಟಿ ಮಾಡಲೇಬೇಕು ಎಂಬ ಹಠಕ್ಕೆ ಬಿದ್ದಾಗ ಬರಹದಲ್ಲಿ ಗಟ್ಟಿತನ ಬರುತ್ತದೆ’ ಎಂದು ಹೇಳಿದರು.
‘ಡಾ. ಆಮೂರ ಅವರು ಡಾ.ಯು.ಆರ್. ಙಅನಂತಮೂರ್ತಿ ಕುರಿತಂತೆ ಬರೆಯುವ ಸಂದರ್ಭದಲ್ಲಿ ಎಸ್.ಎಲ್.ಭೈರಪ್ಪ ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕೃತಿಗಳ ಬಗ್ಗೆ ಸ್ಪಂದನೆ ಮಾಡಲಿಲ್ಲ ಎಂದಿದ್ದಾರೆ. ಆದರೆ ತೇಜಸ್ವಿ ಅವ ರನ್ನು ಅನಂತಮೂರ್ತಿ ಮೆಚ್ಚಿಕೊಂಡಿ ದ್ದರು’ ಎಂದರು.
‘ವಚನ ವಿನ್ಯಾಸ ಕೃತಿಯನ್ನು ಹಲ ವರು ಟೀಕಿಸಿದ್ದರು. ನಾನು ಚರ್ಚಿಸಿದ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆಯೇ ಇಲ್ಲ ಎಂದು ಕೆಲವರು ಹೇಳಿದ್ದರು. ಆದರೆ ಕವಿ ಎಚ್.ಎಸ್.ವೆಂಕಟೇಶ ಮೂರ್ತಿ, ವಚನಗಳಲ್ಲಿನ ಸಾರವನ್ನು ಗಿರಡ್ಡಿ ಹಿಂಜಿ ತೆಗೆದಿದ್ದಾರೆ. ಬರೆಯಲು ಏನೂ ಉಳಿಸಿಲ್ಲ ಎಂಬ ಒಳ್ಳೆಯ ಮಾತುಗಳನ್ನು ಆಡಿದ್ದರು’ ಎಂದು ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ತಿಳಿಸಿದರು.
ಗ್ರಂಥಮಾಲೆಗೆ ಹೊಸ ಆಯಾಮ: ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಸಿದ್ಧ ಲಿಂಗ ಪಟ್ಟಣಶೆಟ್ಟಿ, ‘ಮನೋಹರ ಗ್ರಂಥ ಮಾಲೆಯ ಒಟ್ಟಿಗೆ ನಮ್ಮ ಬೆಳವಣಿಗೆ ಯಾಗಿದೆ. ಮೊದಮೊದಲು ಇದು ಒಂದೇ ಜಾತಿಯವರ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತದೆ ಎಂಬ ಭಾವನೆ ಯಿತ್ತು. ಈ ಬಗ್ಗೆ ಟೀಕೆಯನ್ನೂ ಮಾಡಿ ದ್ದೆವು. ಆದರೆ ಅದನ್ನೆಲ್ಲ ಮೀರಿ ಈಗ ಗ್ರಂಥಮಾಲೆ ಹೊಸ ಆಯಾಮ ಪಡೆ ದುಕೊಂಡಿದೆ’ ಎಂದು ಶ್ಲಾಘಿಸಿದರು.
ಸಾಕು ನಾಯಿ ‘ಲಿಯೊ’ ಕುರಿತಂತೆ ಆತ್ಮವೃತ್ತಾಂತದಲ್ಲಿ ಬರೆದ ರಜನಿ ನರಹಳ್ಳಿ ಕೆಲ ಹೊತ್ತು ಮಾತನಾಡುವಾಗ ಭಾವುಕರಾದರು. ಆರ್ಯ ಆಚಾರ್ಯ, ಬಸು ಬೇವಿನಗಿಡದ, ಪ್ರಕಾಶ ಗರುಡ ಅನಿಸಿಕೆ ಹಂಚಿಕೊಂಡರು.
ಗ್ರಂಥಮಾಲೆಯ ಸಂಪಾದಕ– ಪ್ರಕಾಶಕ ಡಾ.ರಮಾಕಾಂತ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.