ADVERTISEMENT

‘ಬಾಲಮಂದಿರದಲ್ಲಿ ನಿತ್ಯಹಿಂಸೆ...’

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 20:03 IST
Last Updated 7 ಜನವರಿ 2014, 20:03 IST

ಹರಿಹರ: ‘ಬಾಲಮಂದಿರದಲ್ಲಿ ನಿತ್ಯ ಬೈಗುಳ, ಹೊಡೆತ. ಜೊತೆಗೆ ವಿಪರೀತ ಕೆಲಸ ಹೇಳುತ್ತಾರೆ. ಆಟ ಆಡಲು ಬಿಡದ ಕಾರಣ ನಾವೆಲ್ಲ ಅಲ್ಲಿಂದ ತಪ್ಪಿಸಿಕೊಂಡು ಬಂದೆವು.....’

– ಬಳ್ಳಾರಿ ಬಾಲಮಂದಿರದಿಂದ ಸೋಮವಾರ ತಪ್ಪಿಸಿಕೊಂಡು ಬಂದ ನಾಲ್ವರು ಬಾಲಕಿಯರ ಮಾತುಗಳು ಪೊಲೀಸರ ಕಣ್ಣಂಚಿನಲ್ಲೂ ನೀರು ತರಿಸಿತು. ತಪ್ಪಿಸಿಕೊಂಡ ಆರು ಮಕ್ಕಳಲ್ಲಿ ಹರಿಹರ ನಗರ ಪೊಲೀಸರು ಮಂಗಳವಾರ ನಾಲ್ವರನ್ನು ರಕ್ಷಿಸಿದ್ದಾರೆ.

ಸ್ವಾತಿ (10) ಎಂಬ ಬಾಲಕಿ ಮಾತನಾಡಿ, ‘ನನ್ನನು ಹೆತ್ತ ಕೂಡಲೇ ಅಮ್ಮ ಆಸ್ಪತ್ರೆಯಲ್ಲಿ ಬಿಟ್ಟು ಹೋದಳು. ಹುಟ್ಟಿನಿಂದಲೇ ಬಾಲಮಂದಿರದಲ್ಲಿ ಬೆಳೆದಿದ್ದೇನೆ. ನನಗೆ ಯಾರೂ ಇಲ್ಲ. ಬಾಲಮಂದಿರದಲ್ಲಿ ನಿತ್ಯ ಹಿಂಸೆ ನೀಡುತ್ತಾರೆ. ಹಿಂಸೆ ತಡೆಯಲಾಗದೇ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದೇನೆ. ದಯವಿಟ್ಟು ಆ ಬಾಲಮಂದಿರಕ್ಕೆ ತಿರುಗಿ ನನ್ನನ್ನು ಕಳುಹಿಸಬೇಡಿ’ ಎಂದು ಅಂಗಲಾಚಿದಳು.

ಸಕ್ಕುಬಾಯಿ ಎಂಬ ಪುಟ್ಟ ಬಾಲಕಿ, ‘ನಮ್ಮಮ್ಮ ನನ್ನನ್ನು ಬಿಟ್ಟು ಹೋದರು. ಅಜ್ಜಿಯೊಬ್ಬಳು ನನ್ನನು ಹೊಸಪೇಟೆಯ ಡಾನ್‌ಬಾಸ್ಕೊ ಶಾಲೆಗೆ ಸೇರಿಸಿದರು. ಶಾಲೆಯವರು ನನ್ನನ್ನು ಬಳ್ಳಾರಿ ಬಾಲಮಂದಿರಕ್ಕೆ ಕಳುಹಿಸಿದರು. ನನಗೆ ಆಟವಾಡಲು, ಟಿ.ವಿ ನೋಡಲು ಬಿಡುವುದಿಲ್ಲ. ಹೊಡೆಯುತ್ತಾರೆ’ ಎಂದು ಕಣ್ಣೀರಿಳಿಸಿದಳು.

ಸ್ವಾತಿ (13) ಮತ್ತು ಶಕೀಲಾ (13) ಮಾತನಾಡಿ, ‘ಬಾಲ ಮಂದಿರದ ಮೇಲ್ವಿಚಾರಕಿ ಬಹಳ ತೊಂದರೆ ನೀಡುತ್ತಿದ್ದಾರೆ. ಅವರು ಮಾಡಬೇಕಾದ ಎಲ್ಲಾ ಕೆಲಸಗಳನ್ನು ನಾವೇ ಮಾಡಿ­ದರೂ, ನಿತ್ಯ ಹೊಡೆತ ತಪ್ಪುವುದಿಲ್ಲ. ಬೇಸರಗೊಂಡ ನಾವೆಲ್ಲರೂ ಸೋಮ­ವಾರ ಸಂಜೆ ಬಾಲಮಂದಿರದಿಂದ ತಪ್ಪಿಸಿಕೊಂಡೆವು. ರಾತ್ರಿ ಬಳ್ಳಾರಿ ರೈಲು ನಿಲ್ದಾಣದಿಂದ ಬೆಂಗಳೂರು ರೈಲು ಹತ್ತಿದೆವು. ಮಂಗಳವಾರ ಬೆಳಿಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಹತ್ತಿ ಹೊರಟೆವು. ಹರಿಹರದಲ್ಲಿ ಪೊಲೀಸರು ನಮ್ಮನ್ನು ಹಿಡಿದು ಠಾಣೆಗೆ ಕರೆತಂದರು’ ಎಂದು ‘ಪ್ರಜಾವಾಣಿ’ಗೆ ಘಟನೆ ವಿವರಿಸಿದರು.

‘ಪೊಲೀಸರು ಠಾಣೆಯಲ್ಲಿ ಏನೂ ತೊಂದರೆ ಮಾಡದೇ ನಮ್ಮಿಂದ ವಿವರ ಪಡೆದರು. ಎಲ್ಲರಿಗೂ ದೋಸೆ ತಿನ್ನಿಸಿ­ದರು ಎಂದು ಹೇಳಿದರು.
ಪಿಎಸ್ಐ ಎಂ.ವಿ.ಮೇಘರಾಜ್, ಈ ಮಕ್ಕಳನ್ನು ಸಿಡಿಪಿಒ ಪಿ. ಲೋಕೇಶಪ್ಪ ಮೂಲಕ ದಾವಣಗೆರೆಯ ರಾಜ್ಯ ಮಹಿಳಾ ನಿಲಯಕ್ಕೆ ಒಪ್ಪಿಸಿದರು.

ಮಾನವೀಯ ಮುಖ
ನಾಲ್ಕನೇ ತರಗತಿ ಓದುತ್ತಿರುವ ಸಕ್ಕುಬಾಯಿ ಎಂಬ ಬಾಲಕಿಯ ಹುಟ್ಟಿದ ಹಬ್ಬ ಆಚರಿಸಿದ ಪೊಲೀಸರು ಮಗುವಿಗೆ ಸಿಹಿ ತಿಂಡಿ ಕೊಡಿಸಿ, ಮಗುವಿನಿಂದ ಸಿಬ್ಬಂದಿಗೆ ಸಿಹಿ ಹಂಚಿಸಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.