ಮೈಸೂರು: ‘ದಸರಾ ಕವಿಗೋಷ್ಠಿಯಲ್ಲಿ ಕವಯಿತ್ರಿಯರಿಗೆ ಪ್ರತ್ಯೇಕ ಅಗತ್ಯವಿಲ್ಲ. ಮುಂದಿನ ವರ್ಷ ಸಮನ್ವಯದ, ಸಮಷ್ಟಿಯ, ಲಿಂಗ ತಾರತಮ್ಯವಿಲ್ಲದ ಕವಿಗೋಷ್ಠಿ ನಡೆಯಲಿ’ ಎಂದು ಡಾ.ಮಲ್ಲಿಕಾ ಘಂಟಿ ಆಶಯ ವ್ಯಕ್ತಪಡಿಸಿದರು.
ನಗರದ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮಹಿಳಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕವಿಗೋಷ್ಠಿ ಉದ್ಘಾಟನೆ ಸಮಾರಂಭ ಪುರುಷಮಯವಾಗಿತ್ತು. ಉದ್ಘಾಟನೆ ಸಮಾರಂಭದಲ್ಲಿ ಕವಿಗೋಷ್ಠಿ ಇದ್ದರೂ ಕವಯಿತ್ರಿಯರನ್ನು ವೇದಿಕೆಗೆ ಕರೆಯಲಿಲ್ಲ. ಇದರೊಂದಿಗೆ ಮಹಿಳಾ, ಯುವ ಹಾಗೂ ಪ್ರಧಾನ ಕವಿಗೋಷ್ಠಿ ಎಂದು ಪ್ರತ್ಯೇಕಿಸಬೇಕಿಲ್ಲ. ನಮ್ಮನ್ನು ‘ಕಂಪಾರ್ಟ್ಮೆಂಟ್’ಗೊಳಿಸಬೇಡಿ. ಮುಖ್ಯವಾಹಿನಿಯೊಂದಿಗೆ ಬೆರೆಯುತ್ತೇವೆ. ಎಲ್ಲರ ಹಾಗೆ ಎಲ್ಲ ಕವಿಗಳು ಕವಿತೆಗಳನ್ನು ನಾವೂ ಕೇಳುತ್ತೆವೆ. ಹೀಗೆಯೇ, ಈ ಕವಿಗೋಷ್ಠಿಯ ಮುಖ್ಯ ಅತಿಥಿಯಾದ ಪ್ರೊ.ಕಾಳೇಗೌಡ ನಾಗವಾರ ಅವರನ್ನು ನಮ್ಮಿಂದಲೇ ಸನ್ಮಾನಿಸಬಹುದಿತ್ತು’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಕಂದಾಚಾರಗಳನ್ನು ತೊರೆಯಲು ಮಹಿಳೆಯರು ಹಾತೊರೆಯುತ್ತಿದ್ದಾರೆ. ಜತೆಗೆ, ಸಮಪಾಲು ಪಡೆಯಬೇಕು ಎನ್ನುವ ಕನಸು ನಮ್ಮದು. ಮಹಿಳೆಯರದು ‘ಅಡುಗೆ ಮನೆ’ ಸಾಹಿತ್ಯ ಎನ್ನುವ ಕಾವ್ಯ ಮೀಮಾಂಸೆ ಇದೆ. ಆದರೆ, ಇದನ್ನು ಮೀರಿದ ಮಹಿಳೆಯರು ಕಾವ್ಯ ಬರೆಯುತ್ತಿದ್ದಾರೆ. ಬಂಡಾಯ ಚಳವಳಿಯ ಆರಂಭದಲ್ಲಿ ಹೊಡಿ, ಬಡಿ, ಕಡಿ ಎಂಬುದನ್ನು ಸೂಕ್ಷ್ಮವಾಗಿ ಇಂದಿನ ಲೇಖಕಿಯರು ಬಬರೆಯುತ್ತಿದ್ದಾರೆ. ಇಂಥವುಗಳನ್ನು ಸಮಾಜ ಗಂಭೀರವಾಗಿ ಪರಿಗಣಿಸಿದರೆ ಬದಲಾವಣೆ ನಿಧಾನವಾಗಿಯಾದರೂ ಸಾಧ್ಯವಾಗುತ್ತದೆ’ ಎಂದು ಆಶಿಸಿದರು.
‘ಉದ್ಯೋಗಿಯಾಗುವ ಮೂಲಕ ಮಹಿಳೆಯರು ಆರ್ಥಿಕ ಸಮಾನತೆಯನ್ನು ಸಾಧಿಸಿದರು ನಿಜ. ಆದರೆ, ನಮ್ಮ ಮನೆಯಲ್ಲಿಯೇ ಅತಿಥಿಗಳಾಗಿರುತ್ತೇವೆ. ಅಂದರೆ ಸಂಬಳ ತರುವವರು ಮಾತ್ರ ಆಗಿರುತ್ತೇವೆ. ಇದರೊಂದಿಗೆ ಸಮಾಜಕ್ಕೆ ಹೊರೆಯಾಗಿರುತ್ತೇವೆ. ಇದರಿಂದ ಯಾಕಾದರೂ ಹೆಣ್ಣಾಗಿ ಹುಟ್ಟಿ ಅನ್ನಿಸುವ ಹಾಗೆ ಈ ಸಮಾಜ ನಡೆದುಕೊಳ್ಳುತ್ತದೆ. ಇದರ ವಿರುದ್ಧ ಕವಯಿತ್ರಿಯರು ಹೆಚ್ಚು ಬರೆಯಬೇಕು’ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಯಾದ ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ‘ಈ ಕವಿಗೋಷ್ಠಿ ನೂರು ಮರ, ನೂರ ಸ್ವರದ ಹಾಗಿದೆ. ಜತೆಗೆ ಈ ನಾಡಿನ ಮಹಿಳಾ ಸಂವೇದನೆಯ ಸ್ವರೂಪ ಅರಿಯಲು ಸಾಧ್ಯವಾಗಿದೆ’ ಎಂದರು.
‘ಕಿರುಕುಳ, ಅಪಮಾನ, ಚಿತ್ರಹಿಂಸೆ ಹೆಚು್ಚತಿ್ತರುವ ಹಿನೆ್ನಲೆಯಲ್ಲಿ ಪ್ರಗತಿಪರ ಕವಯಿತಿ್ರಯರ ಕವಿಗೋಷ್ಠಿಯನ್ನು ಆಯೋಜಿಸಲಾಗಿದೆ. ಆದರೆ, ಸರ್ಕಾರಿ ಕವಿಗೋಷ್ಠಿ ಎಂದು ಅನೇಕರು ಭಾಗವಹಿಸಲು ಯೋಚಿಸುತ್ತಾರೆ. ಹಾಗೆ ಯೋಚಿಸದೆ ನಮ್ಮ ತೆರಿಗೆ ದುಡ್ಡಲ್ಲಿ ನಡೆಯುವ ಕವಿಗೋಷ್ಠಿಯಲ್ಲಿ ಭಾಗವಹಿಸಬೇಕು’ ಎಂದು ಸಲಹೆ ನೀಡಿದರು.
‘ಮಹಿಳಾ ಪೂಜಾರಿಗಳ ಅಗತ್ಯವಿದೆ’
‘ನಾಡಿನ ಅಸಂಖ್ಯ ದೇವಾಲಯಗಳಲ್ಲಿ ಪೂಜಾರಿಗಳು ಗಂಡಸರೇ ಇದ್ದಾರೆ. ಮಹಿಳೆಯರು ಇಲ್ಲವೇ ಇಲ್ಲ ಎನ್ನುವ ಹಾಗೆ ಇದ್ದಾರೆ. ದೇವತೆಗಳಿಗೆ ನಿತ್ಯ ಸ್ನಾನ ಮಾಡಿಸಿ, ಸೀರೆ ಉಡಿಸುವವರು ಗಂಡಸರು. ಇವರ ಹಾಗೆ ಮಹಿಳೆಯರು ಪೂಜಾರಿಗಳಾಗುವ ಅವಕಾಶ ಸಿಗಬೇಕು’ ಎಂದು ಡಾ.ಮಲ್ಲಿಕಾ ಘಂಟಿ ಆಗ್ರಹಿಸಿದರು. ‘ಶಬರಿಮಲೈ ದೇವಾಲಯದಲ್ಲಿ ಮಹಿಳೆಯರಿಗೆ ಪ್ರವೇಶ ಸಿಗಬೇಕು. ಇದು ನಮ್ಮ ಹಕ್ಕಿನ ಪ್ರತಿಪಾದನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.