ADVERTISEMENT

‘ಯುಕ್ತಿ’ಯಿಂದ ‘ಉಕ್ತಿ’ ಬಳಸಿದ ಡಿ.ವಿ.ಎಸ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2014, 13:47 IST
Last Updated 8 ಜುಲೈ 2014, 13:47 IST

ಬೆಂಗಳೂರು: ತಮ್ಮ ಚೊಚ್ಚಲ ರೈಲ್ವೆ ಬಜೆಟ್‌ ಮಂಡನೆ ವೇಳೆ ಡಿ.ವಿ. ಸದಾನಂದ ಗೌಡ ಅವರು, ಡಿ.ವಿ.ಜಿ ಸೇರಿದಂತೆ ಹಲವು ಮಹಾನ್ ಪುರುಷರ ಉಕ್ತಿಗಳನ್ನು ಉಲ್ಲೇಖಿಸಿದರು.

ಬಜೆಟ್ ಮಂಡನೆ ವೇಳೆ, ಕಳೆದೊಂದು ತಿಂಗಳ ಅಧಿಕಾರಾವಧಿಯಲ್ಲಿ ಹೊಸ ರೈಲು, ಹೊಸ ಮಾರ್ಗ ಸೇರಿದಂತೆ ಹಲವು ವಿಷಯಗಳ ಸಂಬಂಧ ಅರ್ಜಿಗಳ ಮಹಾಪೂರವೇ ಕಚೇರಿಗೆ ಹರಿದು ಬಂತು. ಅವು ಹಲವು ಸಮಸ್ಯೆಗಳನ್ನು ತೆರೆದಿಟ್ಟವು. ಇಲಾಖೆಯ ಸಚಿವನಾಗಿ ಅವುಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ನನಗೆ ನೆನಪಿಸಿದ್ದು ಕೌಟಿಲ್ಯ ಅವರ ಈ ನುಡಿ ಎನ್ನುತ್ತಾ ಸದಾನಂದ ಗೌಡರು...

ಪ್ರಜಾಸುಖೆ ಸುಖಂ ರಾಜ್ಯ... (ಪ್ರಜೆಗಳ ಸುಖದಲ್ಲಿ ರಾಜನ ಸುಖ ಅಡಗಿದೆ.)’ ಎಂಬ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಕೌಟಿಲ್ಯ ಅವರ ಉಕ್ತಿಯನ್ನು ಉಲ್ಲೇಖಿಸಿದರು.

ADVERTISEMENT

ಬಳಿಕ ರೈಲ್ವೆ ಇಲಾಖೆಯ ಆರ್ಥಿಕ ಪರಿಸ್ಥಿತಿ ಹಾಗೂ ಸುಧಾರಣಾ ಕ್ರಮಗಳ ಬಗ್ಗೆ ಪ್ರಸ್ತಾಪಿಸುವಾಗ...

‘ಯತ್‌ದಗ್ರೆ ವಿಷಮಿವ ಪರಿಣಾಮೆ ಅಮೃತೊಪಮಂ’ (ಆರಂಭದಲ್ಲಿ ಔಷಧಿ ವಿಷದಂತೆ ಕಂಡರೂ ಅಂತ್ಯದಲ್ಲಿ  ಜೇನಿನ ಅನುಭವ ನೀಡುತ್ತದೆ) ಎಂಬ ಸಂಸ್ಕೃತ ಶ್ಲೋಕವನ್ನು ಬಳಸಿಕೊಂಡು ಇತ್ತೀಚೆಗೆ ಘೋಷಿಸಿದ್ದ ಪ್ರಯಾಣ ದರ ಏರಿಕೆ ಹಾಗೂ ಸರಕು ಸಾಗಣೆ ದರ ಹೆಚ್ಚಳವನ್ನು ಸಮರ್ಥಿಸಿಕೊಂಡರು.

ಬಳಿಕ ರೈಲ್ವೆಯ ಸ್ವಚ್ಛತೆಯ ವಿಷಯ ಪ್ರಸ್ತಾಪಿಸುವಾಗ ಗಾಂಧಿಜಿ ಅವರ ‘ಸ್ವಚ್ಛತೆಗೆ ದೇವರಿನ ನಂತರದ ಸ್ಥಾನವಿದೆ’ ಎಂಬುದನ್ನು ಉಲ್ಲೇಖಿಸಿದರು.

ಅಂತಿಮವಾಗಿ..
ಸಂದೇಹವೀ ಕೃತಿಯೊಳಿನ್ನಿಲ್ಲವೆಂದಲ್ಲ/
ಇಂದು ನಂಬಿಹುದೆ ಮುಂದೆಂದುಮೆಂದಲ್ಲ//
ಕುಂದು ತೋರ್ದಂದದನು ತಿದ್ದಿಕೊಳೆ ಮನಸುಂಟು/
ಇಂದಿಗೀ ಮತವುಚಿತ –ಮಂಕುತಿಮ್ಮ 

ಎಂಬ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಸಾಲುಗಳ ಉಲ್ಲೇಖದೊಂದಿಗೆ ಸದಾನಂದಗೌಡ ಅವರು ತಮ್ಮ ಬಜೆಟ್ ಮಂಡನೆ ಮುಗಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.