ADVERTISEMENT

‘ರಾಷ್ಟ್ರಕವಿ ಸ್ಥಾನಕ್ಕೆ ಅರ್ಹರಿದ್ದಾರೆ’

​ಪ್ರಜಾವಾಣಿ ವಾರ್ತೆ
Published 14 ಜೂನ್ 2015, 19:30 IST
Last Updated 14 ಜೂನ್ 2015, 19:30 IST

ದಾವಣಗೆರೆ: ರಾಷ್ಟ್ರಕವಿ ಸ್ಥಾನಕ್ಕೆ ಯಾರೂ ಅರ್ಹರಿಲ್ಲ, ರಾಷ್ಟ್ರಕವಿ ಹುದ್ದೆಯೇ ಅನಾವಶ್ಯಕ ಹಾಗೂ ಸಂವಿಧಾನ ವಿರೋಧಿ ಎಂಬ ರಾಜ್ಯ ಸರ್ಕಾರದ ಧೋರಣೆ ಸರಿಯಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುಂಡಲೀಕ ಹಾಲಂಬಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ದಾವಣಗೆರೆಯ ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕನ್ನಡ ರಂಗಭೂಮಿ ಮರುಚಿಂತನೆ’ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುವೆಂಪು ಅವರ ನಂತರವೂ ರಾಷ್ಟ್ರಕವಿಯ ಸ್ಥಾನವನ್ನು ತುಂಬಬಲ್ಲ ಹಾಗೂ ಅರ್ಹತೆ ಇರುವ ಅನೇಕರು ನಮ್ಮ ನಾಡಿನಲ್ಲಿದ್ದಾರೆ.

ಅವರಲ್ಲಿ ಒಬ್ಬರನ್ನು ರಾಷ್ಟ್ರಕವಿಯನ್ನಾಗಿ ಆಯ್ಕೆ ಮಾಡುವ ಮೂಲಕ ಆ ಸ್ಥಾನದ ಘನತೆಯನ್ನು ಹೆಚ್ಚಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡ ಮಾಧ್ಯಮ ಕಡ್ಡಾಯ:  ಕನ್ನಡ ಭಾಷೆಗೆ ಆತಂಕದ ದಿನಗಳು ಎದುರಾಗುತ್ತಿವೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಲೇಬೇಕಿದೆ. ಈ ವಿಚಾರವಾಗಿ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲೇಬೇಕು.

ಇಲ್ಲವಾದರೆ, ಮುಂದಿನ ಪೀಳಿಗೆಯ ಹೊತ್ತಿಗೆ ಕನ್ನಡ ಭಾಷೆ ನೇಪಥ್ಯಕ್ಕೆ ಸರಿಯುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸಾಹಿತಿ ಬಿ.ಟಿ.ಲಲಿತಾನಾಯಕ ಅವರಿಗೆ ‘ಸಂಗೊಳ್ಳಿ ರಾಯಣ್ಣ ಪ್ರಶಸ್ತಿ’ ನೀಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT