ADVERTISEMENT

‘ಲಕ್ಷ ಎಣಿಸಿದರೂ ಕೆಲಸ ಮಾಡದ ಪ್ರಾಧ್ಯಾಪಕರು’

ಹಸ್ತಪ್ರತಿ ಸಮ್ಮೇಳನದಲ್ಲಿ ಚಂದ್ರಶೇಖರ ಕಂಬಾರ ಟೀಕೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2014, 19:30 IST
Last Updated 5 ಫೆಬ್ರುವರಿ 2014, 19:30 IST

ಧಾರವಾಡ: ‘ವಿಶ್ವವಿದ್ಯಾಲಯದ ಪ್ರಾಧ್ಯಾ­ಪಕರು ತಿಂಗಳು ಬಂತೆಂದರೆ ಲಕ್ಷ­ಗಟ್ಟಲೇ ಪಗಾರ ಎಣಿಸುತ್ತಾರೆ. ಆದರೆ ಪಡೆದ ಪಗಾರಕ್ಕೆ ತಕ್ಕಂತೆ ಅವರು ಸರಿಯಾಗಿ ಕೆಲಸ ಮಾಡು­ತ್ತಿಲ್ಲ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ ಟೀಕಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗ ಹಾಗೂ ಜೆಎಸ್‌­ಎಸ್‌ ಸಂಸ್ಥೆಯ ಸಹ­ಯೋ­ಗದಲ್ಲಿ ಬುಧವಾರ ನಗರದಲ್ಲಿ ಆಯೋ­ಜಿಸಿದ್ದ ರಾಜ್ಯ ಮಟ್ಟದ  ಹಸ್ತ­ಪ್ರತಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಪಗಾರ ಜಾಸ್ತಿ ಬರುತ್ತಿದೆ ಎಂದು ನನಗೆ ಅಸೂಯೆಯೇನೂ ಇಲ್ಲ. ಆದರೆ, ಅದಕ್ಕೆ ತಕ್ಕಂತೆ ಕೆಲಸಗಳು ಆಗು­ತ್ತಿಲ್ಲ. ರಾಜ್ಯದಲ್ಲಿ ಸಂಗೀತ ವಿಶ್ವ­ವಿದ್ಯಾಲಯ ಸೇರಿದಂತೆ ಹತ್ತಾರು ವಿ.ವಿ.­ಗಳಲ್ಲಿ ಸಂಗೀತ ವಿಭಾಗಗಳಿವೆ. ಆದರೆ ಇಲ್ಲಿಯವರೆಗೂ ಒಬ್ಬನೇ ಒಬ್ಬ ಸಂಗೀತ ಪಂಡಿತನನ್ನು ರೂಪಿಸಲು ಆಗಿಲ್ಲ. ಸಂಗೀತ ಕಲಿತವರು ಪತ್ರಿಕೆ­ಗಳಲ್ಲಿ ನೀರಸ ವಿಮರ್ಶೆ ಬರೆ­ಯು­ವು­ದರಲ್ಲಿ ತೊಡಗಿದ್ದಾರೆ. ಅಲ್ಲದೇ, ಹಸ್ತ­ಪ್ರತಿಗೆ ಸಂಬಂಧಿಸಿದಂತೆ ಇನ್ನೂ ಆಗಬೇ­ಕಾದ ಕೆಲಸಗಳು ಬಹಳ ಇವೆ’ ಎಂದರು.

‘ಬ್ರಿಟಿಷ­ರಿಂದ ಎರವಲು ಪಡೆದ ನಮ್ಮ ಶಿಕ್ಷಣ ಪದ್ಧತಿ ಕೇವಲ ಅಮೆರಿಕಕ್ಕೆ ಅನು­ಕೂಲವಾಗುವ ಕ್ಲರ್ಕ್‌ಗಳನ್ನು ತಯಾ­ರಿ­ಸುತ್ತಿದೆ. ಮಕ್ಕಳಲ್ಲಿನ ಸೃಜನ­ಶೀಲತೆಯನ್ನು ನಾವೆಲ್ಲ ಬಲಿ ಕೊಡು­ತ್ತಿದ್ದೇವೆ. ಬೆಂಗಳೂರಿನಲ್ಲಿರುವ ಎಷ್ಟೋ ಪೋಷಕರು ತಮ್ಮ ಮಕ್ಕಳು ಅಮೆರಿಕ­ದಲ್ಲಿ ಕೆಲಸ ಮಾಡಿ, ಅಲ್ಲಿನ ಪೌರತ್ವ ಪಡೆಯುವುದನ್ನು ಬಯಸು­ತ್ತಿದ್ದಾರೆ’ ಎಂದು ವಿಷಾದಿಸಿದರು.

ಸಮಾರೋಪ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ.ಹಂಪ ನಾಗ­ರಾಜಯ್ಯ, ‘ಹಳೆಯ ಸಾಹಿತ್ಯ ಪ್ರಾಕೃತ­ದಲ್ಲಿ ರಚನೆಯಾಗಿದ್ದರೂ ಭಾಷಾ ರಾಜ­ಕೀಯ­ದಿಂದಾಗಿ ಕೇವಲ ಸಂಸ್ಕೃತ­ವನ್ನು ಜೀವಂತವಾಗಿಟ್ಟುಕೊಂಡು ಪ್ರಾಕೃ­ತ­ವನ್ನು
ಮೂಲೆಗೆ ತಳ್ಳಲಾಗಿದೆ. ಐತಿ­­ಹಾಸಿಕವಾಗಿ ನೋಡಿದಾಗ ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳೆರಡೂ ಅಷ್ಟೇ ಮಹತ್ವವನ್ನು ಪಡೆದುಕೊಂಡಿದ್ದವು. ಕಾಳಿದಾಸ, ಭಾಸ ಕವಿಗಳು ರಚಿಸಿದ ಸಂಸ್ಕೃತ ನಾಟಕಗಳಲ್ಲಿ ಶೇ 60 ರಷ್ಟು ಪ್ರಾಕೃತ ಶಬ್ದಗಳೇ ತುಂಬಿಕೊಂಡಿವೆ. ದೇಶದಲ್ಲಿ ಹಲವು ಸಂಸ್ಕೃತ ವಿಶ್ವವಿದ್ಯಾಲಯಗಳಿವೆ.

ನೂರಾರು ಕಾಲೇಜುಗಳಿವೆ. ಆದರೆ ಪ್ರಾಕೃತ ಬೋಧಿಸುವ ಒಂದೇ ಒಂದು ಕಾಲೇಜು ಇಲ್ಲ’ ಎಂದು ಹೇಳಿದರು.
ಹಿರಿಯ ಶಾಸನಶಾಸ್ತ್ರಜ್ಞ ಡಾ.ಶ್ರೀನಿವಾಸ ರಿತ್ತಿ ಮಾತನಾಡಿ, ‘ಶಾಸನ ಸಾಹಿತ್ಯಕ್ಕೂ, ಹಸ್ತಪ್ರತಿ ಶಾಸ್ತ್ರಕ್ಕೂ ಸೋದರ ಸಂಬಂಧವಿದೆ. ಹಸ್ತ ಪ್ರತಿಗಳನ್ನು ಓದುವಾಗ ಹೃಸ್ವ ದೀರ್ಘಗಳು, ಪದಛ್ಛೇದಗಳು ಆಭಾಸವಾಗಿ ಅನೇಕ ಅವಾಂತರಗಳಿಗೆ ಕಾರಣವಾಗುತ್ತವೆ. ಹಳಗನ್ನಡ ಓದು, ಶಾಸನಗಳ ಓದು ಇವುಗಳನ್ನು ಇಂದಿನ ಜನಾಂಗಕ್ಕೆ ಕಲಿಸಬೇಕಾದ ಅಗತ್ಯವಿದೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.