ADVERTISEMENT

‘ಬಿಜೆಪಿ ಸೇರುವಂತೆ ಕೇಂದ್ರ ತನಿಖಾ ಏಜೆನ್ಸಿಗಳ ಅಧಿಕಾರಿಗಳಿಂದ ಒತ್ತಡ’

ಜೈಲಿಗೆ ಹೋಗಲು ಹೆದರಲ್ಲ– ಡಿ.ಕೆ. ಸುರೇಶ್‌

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 20:16 IST
Last Updated 7 ನವೆಂಬರ್ 2018, 20:16 IST
   

ಬೆಂಗಳೂರು: ‘ಬಿಜೆಪಿ ನಾಯಕರ ಜೊತೆ ಚರ್ಚೆ ಮಾಡಿ ವ್ಯವಹಾರ ಸರಿಮಾಡಿಕೊಳ್ಳಿ ಎಂದು ಕೇಂದ್ರ ಸರ್ಕಾರದ ಅಧೀನದ ತನಿಖಾ ಏಜೆನ್ಸಿಗಳ ಅಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ’ ಎಂದು ಸಂಸದ ಡಿ.ಕೆ. ಸುರೇಶ್ ಗಂಭೀರ ಆರೋಪ ಮಾಡಿದರು.

‘ಜಾರಿ ನಿರ್ದೇಶನಾಲಯ (ಇ.ಡಿ), ಆದಾಯ ತೆರಿಗೆ (ಐ.ಟಿ) ಇಲಾಖೆ , ಸಿಬಿಐಯಂತಹ ಸ್ವತಂತ್ರ ಸಂಸ್ಥೆಗಳನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳುತ್ತಿದೆ. ನನಗೆ ಮತ್ತು ಸಹೋದರ ಡಿ.ಕೆ.ಶಿವಕುಮಾರ್‍ ಮೇಲೆ ಅಧಿಕಾರಿಗಳು ಕ್ರಮ ಜರುಗಿಸುವ ಎಂಬ ಎಚ್ಚರಿಕೆ ನೀಡಿದ್ದಾರೆ’ ಎಂದು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ದೂರಿದರು.

‘ನಾವು ಬಿಜೆಪಿಗೆ ಹೋಗಬೇಕು, ಇಲ್ಲದಿದ್ದರೆ ಜೈಲಿಗೆ ಹೋಗಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‍ನವರಾದ ನಾವು ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ. ಜೈಲಿಗೆ ಹೋಗಲೂ ಸಿದ್ಧರಿದ್ದೇವೆ’ ಎಂದು ಹೇಳಿದರು.

ADVERTISEMENT

‘ಉಪಚುನಾವಣೆಯ ಪ್ರಚಾರ ವೇಳೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಶ್ರೀರಾಮುಲು, ಡಿಕೆಶಿ ಜೈಲಿಗೆ ಶಾಂತ ದೆಹಲಿಗೆ ಎಂಬ ಹೇಳಿಕೆ ನೀಡಿದ್ದರು. ಆ ಪಕ್ಷದ ಒಳಗಿನ ಚರ್ಚೆಯನ್ನು ಅವರು ಬಹಿರಂಗಪಡಿಸಿದ್ದಾರೆ. 6ರಂದು ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. 7ನೇ ತಾರೀಕಿನಿಂದ ನಮ್ಮ ವಿರುದ್ಧ ಕಾರ್ಯಾಚರಣೆ ಆರಂಭಗೊಂಡಂತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.