ADVERTISEMENT

₹13,000 ಕೋಟಿ ‘ಅನಾಥ’

ಬಜೆಟ್‌ ಅನುದಾನ ವಿನಿಯೋಗಕ್ಕೆ ಹಿಂದೇಟು: ಸಿಎಜಿ ವರದಿಯಲ್ಲಿ ಬಹಿರಂಗ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:42 IST
Last Updated 6 ಜುಲೈ 2018, 19:42 IST
   

ಬೆಂಗಳೂರು: ಜನರ ಕಲ್ಯಾಣಕ್ಕೆ, ಅಭಿವೃದ್ಧಿಯೆಡೆಗೆ ರಾಜ್ಯವನ್ನು ಕೊಂಡೊಯ್ಯುವುದಕ್ಕೆ ಸಂಪನ್ಮೂಲ ಇಲ್ಲ ಎಂದು ಆಳುವವರು ಗೊಣಗಾಡುವುದು, ಹಣ ಹೊಂದಿಸಲು ಹೆಣಗಾಡುವುದು ಸರ್ಕಾರದಲ್ಲಿ ಸಾಮಾನ್ಯ. ಆದರೆ 2016–17ರಲ್ಲಿ ವಿವಿಧ ಇಲಾಖೆಗಳಿಗೆ ಲಭ್ಯವಿದ್ದ ₹ 13 ಸಾವಿರ ಕೋಟಿಗಳನ್ನು ಬಳಕೆ ಮಾಡದಿರುವುದು ಬಯಲಾಗಿದೆ.

ಅದರಲ್ಲೂ ಜನರ ಅಭ್ಯುದಯಕ್ಕೆ ನೇರ ಸಂಬಂಧ ಇರುವ ಶಿಕ್ಷಣ, ಜಲ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಗಳೇ ಹಣ ಬಳಕೆಯಲ್ಲಿ ತುಂಬಾ ಹಿಂದೆ ಬಿದ್ದಿವೆ. ಇದರಿಂದ ಯೋಜನೆಗಳ ಅನುಷ್ಠಾನ ಕೂಡ ಕುಂಠಿತಗೊಂಡಿದೆ. ವಿಧಾನ ಮಂಡಲದಲ್ಲಿ ಶುಕ್ರವಾರ ಮಂಡಿಸಿದ ‘ರಾಜ್ಯ ಸರ್ಕಾರದ ಹಣಕಾಸಿನ ವ್ಯವಹಾರಗಳು’ ಎಂಬ ‘ಸಿಎಜಿ’ ವರದಿಯಲ್ಲಿ ಈ ಲೋಪವನ್ನು ಎತ್ತಿ ತೋರಲಾಗಿದೆ.

ಆರ್ಥಿಕ ವರ್ಷ ಕೊನೆಗೊಳ್ಳಲು ಕೇವಲ ಎರಡು ದಿನಗಳು ಬಾಕಿಯಿದ್ದಾಗ ₹ 1,789 ಕೋಟಿ ವಿನಿಯೋಗ ಮಾಡಲಾಗಿದೆ. ಶಾಸಕಾಂಗದ ಅನುಮತಿ ಇಲ್ಲದೆ ₹ 124 ಕೋಟಿ ಮೊತ್ತ ಬಳಕೆಯಾಗಿದ್ದನ್ನೂ ಪತ್ತೆ ಮಾಡಲಾಗಿದೆ.

ADVERTISEMENT

ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ₹ 260 ಕೋಟಿ ಮೊತ್ತವನ್ನು ವೈಯಕ್ತಿಕ ಠೇವಣಿಯಲ್ಲಿ ಇಟ್ಟಿರುವುದಕ್ಕೆ ಆಕ್ಷೇಪ ಎತ್ತಲಾಗಿದೆ.

ಬಾಲಕಿಯರ ಪ್ರಾಥಮಿಕ ಶಿಕ್ಷಣ ಉತ್ತೇಜನಕ್ಕಾಗಿ ಕೇಂದ್ರದಿಂದ ಸಿಕ್ಕಿದ್ದ ಪ್ರೋತ್ಸಾಹ ಧನವನ್ನೂ ವಿನಿಯೋಗ ಮಾಡಲು ಶಿಕ್ಷಣ
ಇಲಾಖೆ ವಿಫಲವಾಗಿದೆ. ಕಂಪ್ಯೂಟರ್‌ ಸಾಕ್ಷರತೆಗೆ ಮೀಸಲಿಟ್ಟಿದ್ದ ಹಣ ಕೂಡ ಹಾಗೇ ಉಳಿದಿದೆ. ಶಾಲೆಗಳಲ್ಲಿ ತಾಂತ್ರಿಕ ಸೌಲಭ್ಯಗಳು ಸಮರ್ಪಕವಾಗಿ ದೊರೆಯದಿರಲು ಅನುದಾನ ಬಳಕೆಯಲ್ಲಿ ತೋರಿರುವ ನಿರ್ಲಕ್ಷ್ಯವೇ ಕಾರಣ ಎಂದು ಬೊಟ್ಟು ಮಾಡಿ ತೋರಲಾಗಿದೆ.

ಕೃಷ್ಣಾ ನೀರಾವರಿ ಯೋಜನೆಗೆ ಅನುದಾನವನ್ನೇ ನೀಡುತ್ತಿಲ್ಲ ಎಂಬುದು ಆ ಭಾಗದ ಶಾಸಕರ ಸಾಮಾನ್ಯ ದೂರು. ಆದರೆ, ಈ ಯೋಜನೆಗೆ ಒದಗಿಸಿದ್ದ ₹ 716 ಕೋಟಿಯಷ್ಟು ದೊಡ್ಡ ಮೊತ್ತವನ್ನು ಜಲ ಸಂಪನ್ಮೂಲ ಇಲಾಖೆ ವಿನಿಯೋಗಿಸದೆ ಉಳಿಸಿಕೊಂಡಿರುವುದನ್ನು ಸಿಎಜಿ ಪತ್ತೆ ಹಚ್ಚಿದೆ.

ಶಿಫಾರಸು: ಆರೋಗ್ಯ ಮತ್ತು ಶಿಕ್ಷಣ ವಿಭಾಗಗಳ ವೆಚ್ಚದ ಅನುಪಾತ ದೇಶದ ಇತರ ರಾಜ್ಯಗಳ ಸರಾಸರಿಗಿಂತ ಕಡಿಮೆಯಿದ್ದು, ಈ ಎರಡೂ ವಿಭಾಗಗಳನ್ನು ಆದ್ಯತಾ ವಲಯಗಳನ್ನಾಗಿ ಪರಿಗಣಿಸಿ ಅಧಿಕ ಅನುದಾನ ವಿನಿಯೋಗಿಸಬೇಕು ಎಂದುಸಿಎಜಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.