ADVERTISEMENT

ಕೋವಿಡ್‌ ನಡುವೆ ಅಂತರರಾಷ್ಟ್ರೀಯ ನರ್ಸ್‌ ದಿನ: ಕಂದನ ಮಿಡಿತ, ಕೆಲಸದ ತುಡಿತ

ಇಂದು ನರ್ಸ್‌ ದಿನ ಕೋವಿಡ್‌ ಆಸ್ಪತ್ರೆಯ ಲತಾ ಕರ್ತವ್ಯ ಪ್ರಜ್ಞೆ

ಕೆ.ಓಂಕಾರ ಮೂರ್ತಿ
Published 11 ಮೇ 2020, 20:15 IST
Last Updated 11 ಮೇ 2020, 20:15 IST
   

ಮೈಸೂರು: ‘ವಾರಗಟ್ಟಲೇ ಕಂದನನ್ನು ಬಿಟ್ಟು ಬರಲು ಸಂಕಟವಾಗುತ್ತೆ. ಆದರೆ, ಅನ್ನ ನೀಡುವ ಕೆಲಸಕ್ಕೆ ಗೌರವ ನೀಡಬೇಕಲ್ಲವೇ? ನನ್ನ ಪಾಲಿಗೆ ಕುಟುಂಬದಷ್ಟೇ ರೋಗಿಗಳ ಆರೈಕೆಯೂ ಮುಖ್ಯ’

–ಹೀಗೆಂದು ಹೇಳಿ ನರ್ಸ್‌ ಲತಾ ನಾಗರಾಜಾಚಾರಿ ಭಾವುಕರಾದರು. ಮೈಸೂರಿನ ಕೋವಿಡ್‌ ಆಸ್ಪತ್ರೆಯಲ್ಲಿ ನರ್ಸ್‌ ಆಗಿರುವ ಇವರಿಗೆ ಒಂದೂವರೆ ವರ್ಷದ ಮಗುವಿದೆ. ಕೆಲಸದ ಬಳಿಕ ಹೋಟೆಲ್‌ನಲ್ಲಿ ಉಳಿಯುತ್ತಾರೆ. ವಾರದಿಂದ ಮಗುವಿನ ಮುಖ ನೋಡಲು ಸಾಧ್ಯವಾಗಿಲ್ಲ.ಇವರ ಪತಿ ಕೆ.ಆರ್‌.ಆಸ್ಪತ್ರೆಯಲ್ಲಿ ಲ್ಯಾಬ್‌ ಟೆಕ್ನಿಷಿಯನ್‌.

‘ಬೇರೆ ಸಮಯದಲ್ಲಿ ಕೆಲಸಕ್ಕೆ ಹೋದರೂ ಮಗುವಿನೊಂದಿಗೆ ಸಮಯ ಕಳೆಯಲು, ಹಾಲುಣಿಸಲು ಸಮಯ ಸಿಗುತ್ತಿತ್ತು. ಆದರೆ, ಇಂಥ ಸಂಕಷ್ಟದ ಸಮಯ
ದಲ್ಲಿ ನಾವೂ ಸ್ಪಂದಿಸಬೇಕಲ್ಲವೇ? ಕರ್ತವ್ಯಕ್ಕೆ ಹಾಜರಾಗಬೇಕಲ್ಲವೇ? ಮಗುವನ್ನು ನನ್ನ ತಂದೆ–ತಾಯಿ ನೋಡಿಕೊಳ್ಳುತ್ತಾರೆ. ಹೀಗಾಗಿ, ಧೈರ್ಯದಿಂದ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗಿದೆ’ ಎಂದು ಲತಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ADVERTISEMENT

ಇವರು 14 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕಡಕೊಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿ
ಸುತ್ತಿದ್ದ ಇವರು ಈಗ ಕೋವಿಡ್ ಬಾಧಿತರ ಆರೈಕೆಯಲ್ಲಿ ತೊಡಗಿದ್ದಾರೆ.

ಉಪನ್ಯಾಸಕ ಈಗ ನರ್ಸ್‌: ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನರ್ಸಿಂಗ್‌ ಕಾಲೇಜಿನಲ್ಲಿ ಬೋಧಕರಾಗಿರುವ ಡಾ.ಪಿ.ನಂದಪ್ರಕಾಶ್‌ ಈಗ ಕೋವಿಡ್‌ ಆಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ, ಇಬ್ಬರು ಹೆಣ್ಣು ಮಕ್ಕಳು. ಪತ್ನಿ ಕೆ.ಆರ್‌.ನಗರದ ಮಕ್ಕಳು ಮತ್ತು ಮಹಿಳೆಯರ ಆಸ್ಪತ್ರೆಯಲ್ಲಿ ನರ್ಸ್‌.

‘ನರ್ಸ್‌ಗಳು, ವೈದ್ಯರಿಗೆ ಕೋವಿಡ್‌ ಸಂದರ್ಭದಲ್ಲಿ ಸಮಾಜ ನೀಡುತ್ತಿರುವ ಗೌರವ ನಮ್ಮಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಿದೆ’ ಎಂದು ಹೇಳುತ್ತಾರೆ.

***

ಈ ಸಮಯದಲ್ಲಿ ಎಲ್ಲವನ್ನೂ ಮರೆತು ಕೆಲಸ ಮಾಡಲೇಬೇಕು. ಸರ್ಕಾರ ಕೂಡ ನಮ್ಮ ರಕ್ಷಣೆಗೆ ಒತ್ತು ನೀಡಿದೆ. ಪತಿಯ ಪ್ರೋತ್ಸಾಹವೂ ಇದೆ

- ಲತಾ ನಾಗರಾಜಾಚಾರಿ, ನರ್ಸ್‌

***

ಆತಂಕದಲ್ಲಿರುವ ಕೋವಿಡ್‌ ಬಾಧಿತರಲ್ಲಿ ಧೈರ್ಯ, ಭರವಸೆ ತುಂಬುವ ಜವಾಬ್ದಾರಿ ನಿಭಾಯಿಸುತ್ತಿದ್ದೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಗೆಲ್ಲುತ್ತೇವೆ

- ಪಿ.ನಂದಪ್ರಕಾಶ್‌, ಶುಶ್ರೂಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.