ADVERTISEMENT

₹ 2.96 ಲಕ್ಷ ಕೋಟಿ ಸಾಲ ವಿತರಣೆ ಗುರಿ

ನಬಾರ್ಡ್‌ನಿಂದ 2021–22ರ ಅಂದಾಜು ವರದಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 16:20 IST
Last Updated 24 ಫೆಬ್ರುವರಿ 2021, 16:20 IST

ಬೆಂಗಳೂರು: ರಾಜ್ಯದಲ್ಲಿ ವಿವಿಧ ಬ್ಯಾಂಕ್‌ಗಳ ಮೂಲಕ 2021–22ನೇ ಆರ್ಥಿಕ ವರ್ಷದಲ್ಲಿ ₹ 2,96,051 ಕೋಟಿ ಮೊತ್ತದ ಸಾಲ ವಿತರಣೆಯ ಗುರಿಯನ್ನು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಅಂದಾಜು ಮಾಡಿದೆ.

ಸಾಲ ವಿತರಣೆಗೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ, ಅಧ್ಯಯನ ನಡೆಸಿ ನಬಾರ್ಡ್‌ ಸಿದ್ಧಪಡಿಸಿರುವ ‘ಸ್ಟೇಟ್‌ ಫೋಕಸ್‌ ಪೇಪರ್‌–2021–22’ ಅನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಬುಧವಾರ ನಗರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

2020–21ನೇ ಹಣಕಾಸು ವರ್ಷದಲ್ಲಿ ₹ 2,44,564 ಕೋಟಿ ಸಾಲ ವಿತರಣೆ ಗುರಿ ನಿಗದಿಪಡಿಸಲಾಗಿತ್ತು. ಮುಂಬರುವ ಆರ್ಥಿಕ ವರ್ಷದಲ್ಲಿ ಸಂಭವನೀಯ ಸಾಲ ವಿತರಣೆಯ ಗುರಿಯನ್ನು ಶೇಕಡ 21.05ರಷ್ಟು ಹೆಚ್ಚಿಸಲಾಗಿದೆ. ಈ ವರದಿಯ ಆಧಾರದಲ್ಲೇ ಎಲ್ಲ ಬ್ಯಾಂಕ್‌ಗಳೂ ತಮ್ಮ ವಾರ್ಷಿಕ ಸಾಲ ಯೋಜನೆಯನ್ನು ಸಿದ್ಧಪಡಿಸಲಿವೆ.

ADVERTISEMENT

ಕೃಷಿ ಮತ್ತು ಪೂರಕ ಚಟುವಟಿಕೆಗಳಿಗಾಗಿ ₹ 1.45 ಲಕ್ಷ ಕೋಟಿ (ಶೇ 49.05) ಮೊತ್ತದ ಸಾಲ ವಿತರಣೆಯ ಗುರಿಯನ್ನು ನಬಾರ್ಡ್‌ ನಿಗದಿಪಡಿಸಿದೆ. ಉದ್ಯಮ ವಲಯಕ್ಕೆ ₹ 1.08 ಲಕ್ಷ ಕೋಟಿ ಹಾಗೂ ವಸತಿ ವಲಯಕ್ಕೆ ₹ 28,579ಕೋಟಿ ಸಾಲ ವಿತರಣೆಯ ಗುರಿಯನ್ನು ಅಂದಾಜು ಮಾಡಲಾಗಿದೆ.

ಕೃಷಿಗೆ ಸಾಲಕ್ಕೆ ಆದ್ಯತೆ ಇರಲಿ: ವರದಿ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌, ‘ಹೆಚ್ಚಿನ ರೈತರಿಗೆ ಸಾಂಸ್ಥಿಕ ಸಾಲ ದೊರೆಯುತ್ತಿಲ್ಲ. ಈ ಕಾರಣದಿಂದ ಅವರು ಖಾಸಗಿ ಲೇವಾದೇವಿದಾರರ ಬಳಿ ಹೋಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಲ ನೀಡಲು ಆಸಕ್ತಿ ತೋರಬೇಕು. ರೈತರ ವರಮಾನ ಹೆಚ್ಚಳಕ್ಕೆ ಪೂರಕವಾಗಿಯೂ ಬ್ಯಾಂಕ್‌ಗಳು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್‌, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್‌, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೇಂದ್ರ ಪ್ರಸಾದ್, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮಹಾ ಪ್ರಧಾನ ವ್ಯವಸ್ಥಾಪಕ ಅಭಿಜಿತ್‌ ಮಜುಂದಾರ್‌ ಮತ್ತು ನಬಾರ್ಡ್‌ ಮಹಾ ಪ್ರಧಾನ ವ್ಯವಸ್ಥಾಪಕ ನೀರಜ್‌ ಕುಮಾರ್‌ ವರ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.