ADVERTISEMENT

ರಾಜ್ಯ ಸರ್ಕಾರದಿಂದ ₹ 400 ಕೋಟಿ ಬಾಕಿ : ಶಿವರಾಮ ಹೆಬ್ಬಾರ್ ಆರೋಪ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:05 IST
Last Updated 2 ಜೂನ್ 2019, 19:05 IST

ಶಿರಸಿ: ವಿದ್ಯಾರ್ಥಿಗಳಿಗೆ ನೀಡುವ ರಿಯಾಯಿತಿ ದರದ ಬಸ್ ಪಾಸ್‌ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕಳೆದೈದು ವರ್ಷಗಳಿಂದ ₹400 ಕೋಟಿ ಬಾಕಿ ಉಳಿಸಿಕೊಂಡಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಶಿವರಾಮ ಹೆಬ್ಬಾರ್ ಅವರು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರತಿವರ್ಷ ಎನ್‌ಡಬ್ಲುಕೆಆರ್‌ಟಿಸಿ ವ್ಯಾಪ್ತಿಯ ಒಂಬತ್ತು ಜಿಲ್ಲೆಗಳ ಸುಮಾರು 5.36 ಲಕ್ಷ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ರಿಯಾಯತಿ ದರದಲ್ಲಿ ಬಸ್ ಪಾಸ್ ವಿತರಿಸುತ್ತದೆ. ಇದಕ್ಕೆ ತಗಲುವ ವೆಚ್ಚದಲ್ಲಿ ಶೇ 50ರಷ್ಟು ರಾಜ್ಯ ಸರ್ಕಾರ ಭರಿಸಬೇಕು. ಆದರೆ, ಸರ್ಕಾರ ಶೇ 8ರಷ್ಟು ಹಣವನ್ನು ಮಾತ್ರ ಪಾವತಿಸುತ್ತಿದೆ. ಇದು ನಿಗಮದ ಆದಾಯಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಕಳೆದ ಅನೇಕ ವರ್ಷಗಳಿಂದ ಅಂದಾಜು₹ 400 ಕೋಟಿ ಹಣ ಸರ್ಕಾರದಿಂದ ಬಾಕಿ ಇದೆ. ಇದರಿಂದಾಗಿ ನಿಗಮದ ಸಿಬ್ಬಂದಿಗೆ ಕೊಡಬೇಕಾಗಿರುವ ವಿವಿಧ ಭತ್ಯೆಗಳು ಬಾಕಿ ಉಳಿದಿವೆ. ₹ 70 ಕೋಟಿಯನ್ನು ಸಿಬ್ಬಂದಿಗೆ ನೀಡುವುದು ವಿಳಂಬವಾಗಿದೆ. ರಾಜ್ಯ ಸರ್ಕಾರ ಆದಷ್ಟು ಶೀಘ್ರ ಈ ಹಣ ಜಮಾ ಮಾಡಬೇಕು’ ಎಂದು ಒತ್ತಾಯಿಸಿದರು.

‘ನಿಗಮವು ಇಡೀ ಉತ್ತರ ಕರ್ನಾಟಕದಲ್ಲಿ ರಸ್ತೆ ಸಾರಿಗೆಯೇ ಮುಖ್ಯ ಸಂಚಾರ ಸಾಧನವಾಗಿದೆ. ಶೇ 95ರಷ್ಟು ಜನರು ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ಅವಲಂಬಿಸಿದ್ದಾರೆ. ದಿನಕ್ಕೆ ಸುಮಾರು 24ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಾರೆ. ನಿಗಮಕ್ಕೆ ಬರಬೇಕಾದ ಬಾಕಿ ಸಂದಾಯವಾಗದಿದ್ದರೆ ಗುಣಮಟ್ಟದ ಸೇವೆ ನೀಡುವುದಾದರೂ ಹೇಗೆ? ಇನ್ನಷ್ಟು ಸೌಲಭ್ಯಗಳನ್ನು ಒದಗಿಸಬೇಕು ಎಂಬ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸುವುದು ಸಾಧ್ಯವಾಗುವುದಿಲ್ಲ. ಉತ್ತರ ಕರ್ನಾಟಕ ಹಿಂದುಳಿದಿದೆ ಎಂಬ ಕೂಗಿಗೆ ಸರ್ಕಾರದ ಈ ನಡೆ ಪರೋಕ್ಷ ಕಾರಣವಾಗಬಹುದು. ಜೂನ್ 7ರಂದು ಮುಖ್ಯಮಂತ್ರಿ ಕರೆದಿರುವ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು’ ಎಂದೂ ಹೇಳಿದರು.

ADVERTISEMENT

‘ನಾನು ಆಪರೇಷನ್ ಕಮಲಕ್ಕೆ ಒಳಗಾಗುವುದು ಸತ್ಯಕ್ಕೆ ದೂರವಾದ ಸಂಗತಿ. ಈ ಸಂಬಂಧ ಅನೇಕರು ನನ್ನನ್ನು ಭೇಟಿ ಮಾಡಿದ್ದಾರೆ, ಆದರೆ ಈ ಬಗ್ಗೆ ನಿರ್ಧಾರ ಮಾತ್ರ ನನ್ನದೇ ಆಗಿರುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.