ADVERTISEMENT

1–5 ತರಗತಿ ಆರಂಭ: ಮಾರ್ಗಸೂಚಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:10 IST
Last Updated 21 ಅಕ್ಟೋಬರ್ 2021, 19:10 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಇದೇ 25ರಿಂದ ಪ್ರಾಥಮಿಕ ಹಂತದಿಂದಲೇ (1ರಿಂದ 5) ತರಗತಿ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು, ವಿದ್ಯಾರ್ಥಿಗಳ ಪ್ರತ್ಯೇಕ ತಂಡ ರಚಿಸಿ ಬೋಧನೆ ಮಾಡಬೇಕು ಮತ್ತು 50 ವರ್ಷ ದಾಟಿದ ಶಿಕ್ಷಕರು ಕಡ್ಡಾಯವಾಗಿ ಫೇಸ್‌ಶೀಲ್ಡ್‌ ಧರಿಸಬೇಕು ಎಂದು ಸೂಚಿಸಿದೆ.

25ರಿಂದ 30ರವರೆಗೆ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ತಂಡ ರಚನೆ ಮಾಡಿ ಅರ್ಧ ದಿನ ಮಾತ್ರ ಭೌತಿಕ ತರಗತಿಗಳು ನಡೆಸಬೇಕು. ನ. 2ರಿಂದ ಪೂರ್ಣ ಪ್ರಮಾಣದಲ್ಲಿ ತರಗತಿ ಆರಂಭಿಸಬೇಕು. ಅಂದಿನಿಂದ ಮಧ್ಯಾಹ್ನದ ಬಿಸಿಯೂಟ ನೀಡಲಾಗುವುದು. ಮಕ್ಕಳು ಮನೆಯಿಂದಲೇ ಬಿಸಿನೀರು ತರುವುದು ಉತ್ತಮ. ವಿದ್ಯಾರ್ಥಿಗಳ ಭೌತಿಕ ಹಾಜರಾತಿ ಕಡ್ಡಾಯವಲ್ಲ. ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳು ಪೋಷಕರಿಂದ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು ಎಂದು ಇಲಾಖೆ ಸೂಚನೆ ನೀಡಿದೆ.

‌ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ವರ್ಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಶಿಕ್ಷಕರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್‌ ಲಸಿಕೆ ಪಡೆದಿರಬೇಕು. ಶಾಲೆಯಲ್ಲಿ ಬಿಸಿನೀರಿನ ವ್ಯವಸ್ಥೆ ಮಾಡಬೇಕು. ಒಂದೂವರೆ ವರ್ಷದ ನಂತರ ಭೌತಿಕ ತರಗತಿ ಆರಂಭ ಆಗುತ್ತಿರುವುದರಿಂದ ಮೊದಲ ವಾರ ಬ್ರಿಡ್ಜ್‌ ಕೋರ್ಸ್‌ಗೆ (ಸೇತುಬಂಧ) ಆದ್ಯತೆ ನೀಡಬೇಕು. ಕೋವಿಡ್‌ ನಿಯಂತ್ರಣ ಸಂಬಂಧ ಸರ್ಕಾರ, ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತಗಳು ನೀಡುವ ಸೂಚನೆ ಕಡ್ಡಾಯವಾಗಿ ಪಾಲಿಸಬೇಕು ಎಂದೂ ತಿಳಿಸಲಾಗಿದೆ. 20 ಮಕ್ಕಳ ತಂಡ ರಚನೆ ಮಾಡಬೇಕು. ಮಕ್ಕಳಲ್ಲಿ ದಿಢೀರ್ ಅಸ್ವಸ್ಥತೆ ಅಥವಾ ರೋಗಲಕ್ಷಣ ಇದ್ದರೆ, ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿ, ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಸೂಚಿಸಬೇಕು ಎಂದು ಮಾರ್ಗಸೂಚಿಯಲ್ಲಿದೆ.

ADVERTISEMENT

ತರಗತಿ ವೇಳಾಪಟ್ಟಿ: ಅ. 25ರಿಂದ 30ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಹಾಗೂ ಶನಿವಾರ ಬೆಳಿಗ್ಗೆ 8ರಿಂದ 11.40ರವರೆಗೆ ತರಗತಿ ನಡೆಸಬೇಕು. ನ. 2ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಹಾಗೂ ಶನಿವಾರ ಬೆಳಿಗ್ಗೆ 8ರಿಂದ 11.40ರವರೆಗೆ ತರಗತಿ ನಡೆಸಲು ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.