ADVERTISEMENT

₹1.50 ಕೋಟಿ ವಂಚನೆ; ಯುವರಾಜ್ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 18:33 IST
Last Updated 29 ಜನವರಿ 2021, 18:33 IST
ಯುವರಾಜ್
ಯುವರಾಜ್   

ಬೆಂಗಳೂರು: ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡರ ಪರಿಚಯಸ್ಥನೆಂದು ಹೇಳಿಕೊಂಡು ಸಾರ್ವಜನಿಕರಿಂದ ನೂರಾರು ಕೋಟಿ ರೂಪಾಯಿ ಪಡೆದು ವಂಚಿಸಿರುವ ಆರೋಪದಡಿ ಸಿಕ್ಕಿಬಿದ್ದಿರುವ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

‘ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಕೊಡಿಸುವುದಾಗಿ ಹೇಳಿದ್ದ ಯುವರಾಜ್, ನನ್ನಿಂದ ₹ 1.50 ಕೋಟಿ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಆಂಧ್ರಪ್ರದೇಶದ ಕಾಳಹಸ್ತಿ ದೇವಸ್ಥಾನ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಆನಂದಕುಮಾರ್ ಎಂಬುವರು ನಗರದ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.

‘ಆಂಧ್ರಪ್ರದೇಶದಲ್ಲಿರುವ ಕಾಳಹಸ್ತಿ ದೇವಸ್ಥಾನಕ್ಕೆ ಯುವರಾಜ್ ಆಗಾಗ ಬರುತ್ತಿದ್ದರು. ನನ್ನನ್ನು ಭೇಟಿಯಾಗುತ್ತಿದ್ದ ಅವರು, ಕುಶಲೋಪರಿ ವಿಚಾರಿಸುತ್ತಿದ್ದರು. ಕೆಲ ತಿಂಗಳ ಹಿಂದಷ್ಟೇ ದೇವಸ್ಥಾನಕ್ಕೆ ಬಂದಿದ್ದ ಆರೋಪಿ, ‘ಕೇಂದ್ರ ಸರ್ಕಾ ರದ ಬಿಜೆಪಿ ಮುಖಂಡರು ಹಾಗೂ ಆರ್‌ಎಸ್‌ಎಸ್ ನಾಯಕರು ನನಗೆ ಪರಿ
ಚಯಸ್ಥರು. ಅವರಿಗೆ ಹೇಳಿ, ನಿಮಗೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಹುದ್ದೆ ಕೊಡಿಸುತ್ತೇನೆ’ ಎಂದಿದ್ದರು. ಮುಖಂಡರ ಜೊತೆ ತೆಗೆಸಿಕೊಂಡಿದ್ದ ಫೋಟೊ ತೋರಿಸಿ ನಂಬಿಸಿದ್ದರು’ ಎಂದು ಆನಂದ ಕುಮಾರ್ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಬೆಂಗಳೂರಿನ ಹೋಟೆಲ್‌ ವೊಂದಕ್ಕೆ ಕರೆಸಿಕೊಂಡಿದ್ದ ಆರೋಪಿ, ಹುದ್ದೆ ಕೊಡಿಸಲು ಬೇಕೆಂದು ಹೇಳಿ ₹1.50 ಕೋಟಿ ಪಡೆದಿದ್ದರು. ಹಲವು ತಿಂಗಳಾದರೂ ಆರೋಪಿ ಯಾವುದೇ ಹುದ್ದೆ ಕೊಡಿಸಿರಲಿಲ್ಲ. ಹಣವನ್ನೂ ವಾಪಸು ನೀಡಿರಲಿಲ್ಲ. ಆ ಬಗ್ಗೆ ಪ್ರಶ್ನಿಸಿದಾಗ, ‘ನೀನು ಇಷ್ಟು ಹಣವನ್ನು ಎಲ್ಲಿಂದ ಸಂಪಾದನೆ ಮಾಡಿದ್ದಿಯಾ? ನಿನ್ನ ವಿರುದ್ಧವೇ ತನಿಖೆ ನಡೆಸಿ ಜೈಲಿಗೆ ಕಳುಹಿಸುತ್ತೇನೆ’ ಎಂದೂ ಆರೋಪಿ ಬೆದರಿಸಿದ್ದರು. ಇತ್ತೀಚೆಗೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ತಿಳಿಯಿತು. ಹೀಗಾಗಿ, ಠಾಣೆಗೆ ಬಂದು ದೂರು ನೀಡುತ್ತಿದ್ದೇನೆ’ ಎಂದೂ ಅವರು ದೂರಿನಲ್ಲಿ ತಿಳಿಸಿದ್ದಾರೆ.

ಹೈಗ್ರೌಂಡ್ಸ್ ಠಾಣೆ ಪೊಲೀಸರು, ‘ಯುವರಾಜ್ ವಿರುದ್ಧದ ಪ್ರಕರಣಗಳ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.