ADVERTISEMENT

ಕೆಪಿಎಸ್‌ಸಿ ಅಕ್ರಮ: 11 ಐಎಎಸ್‌ ಅಧಿಕಾರಿಗಳಿಗೆ ಹಿಂಬಡ್ತಿ

ಕೊನೆಗೂ ಕ್ರಮಕ್ಕೆ ಮುಂದಾದ ಸರ್ಕಾರ: 36 ಗೆಜೆಟೆಡ್‌ ಅಧಿಕಾರಿಗಳ ಹುದ್ದೆಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 20:15 IST
Last Updated 22 ನವೆಂಬರ್ 2019, 20:15 IST
   

ಬೆಂಗಳೂರು: ನ್ಯಾಯಾಂಗ ನಿಂದನೆಯ ಚಾಟಿಯೇಟಿನಿಂದ ತಪ್ಪಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ, 1998 ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ 383 ಹುದ್ದೆಗಳ ನೇಮಕಾತಿ ವಿವಾದಕ್ಕೆ ಅಂತಿಮ ತೆರೆ ಎಳೆಯಲು ಕೊನೆಗೂ ನಿರ್ಧರಿಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ 2016 ರ ಜೂನ್‌ 21 ರಂದು ನೀಡಿದ್ದ ತೀರ್ಪಿನಂತೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರಿಷ್ಕರಿಸಿರುವ ಆಯ್ಕೆ ಪಟ್ಟಿಯನ್ನು ತಕ್ಷಣವೇಯಥಾವತ್ತಾಗಿ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಇದೇ ಆಗಸ್ಟ್‌ 22 ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿದ, ಹೊಸ ಪರಿಷ್ಕೃತ ಆಯ್ಕೆಪಟ್ಟಿ ಜಾರಿಯಿಂದ 11 ಐಎಎಸ್ ಅಧಿಕಾರಿಗಳು ಹಿಂಬಡ್ತಿ ಪಡೆಯಲಿದ್ದಾರೆ. 36 ಗೆಜೆಟೆಡ್‌ ಅಧಿಕಾರಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. 115 ಅಧಿಕಾರಿಗಳ ಹುದ್ದೆಗಳು ಬದಲಾಗಲಿವೆ.

ADVERTISEMENT

ಹೈಕೋರ್ಟ್‌ ಈ ಸಂಬಂಧ ನೀಡಿರುವ ತೀರ್ಪು ಜಾರಿಯಾಗದೆ ಮತ್ತು ದೀರ್ಘ ಅವಧಿಯಿಂದ ಪ್ರಕರಣ ಇತ್ಯರ್ಥವಾಗದೇ ಬಾಕಿ ಉಳಿದಿತ್ತು. ತೀರ್ಪು ಜಾರಿಗೊಳಿಸದೇ ಇದ್ದರೆ, ಸರ್ಕಾರವು ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ಪರಿಷ್ಕೃತ ಪಟ್ಟಿ ಜಾರಿಗೊಳಿಸಲು ಕ್ರಮವಹಿಸಿ ಎಂದುಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರಿಗೆ ಪತ್ರ ಬರೆದು ನಿರ್ದೇಶನ ನೀಡಿದ್ದಾರೆ.

1998 ನೇ ಸಾಲಿನ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ, ಅನರ್ಹರನ್ನು ಕೈಬಿಟ್ಟು ಅರ್ಹರಿಗೆ ನೇಮಕಾತಿ ಆದೇಶ ನೀಡುವಂತೆ ಹೈಕೋರ್ಟ್‌ ತೀರ್ಪು ನೀಡಿತ್ತು. ಅದೇ ತೀರ್ಪನ್ನು ಸುಪ್ರೀಂಕೋರ್ಟ್‌ ಕೂಡಾ ಎತ್ತಿ ಹಿಡಿದಿತ್ತು. ತೀರ್ಪು ವಿರುದ್ಧ ಸಲ್ಲಿಕೆಯಾಗಿದ್ದ ಎಲ್ಲ ಮೇಲ್ಮನವಿಗಳನ್ನು ಸುಪ್ರೀಂಕೋರ್ಟ್‌ ವಜಾ ಮಾಡಿತ್ತು.

ತೀರ್ಪು ಪಾಲನೆ ಆಗಿಲ್ಲ ಎಂದು ಸಲ್ಲಿಕೆಯಾಗಿದ್ದ ‘ನ್ಯಾಯಾಂಗ ನಿಂದನೆ’ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಇದೇ 14 ರಂದು ನಡೆದ ವಿಚಾರಣಾ ವೇಳೆ, ತೀರ್ಪು ಪಾಲನೆಗೆ ಹೈಕೋರ್ಟ್‌ ಪೀಠ ನಾಲ್ಕು ವಾರಗಳ ಗಡುವು ನೀಡಿತ್ತು.

ಈ ಮಧ್ಯೆ, ಹಿಂಬಡ್ತಿ ಆತಂಕ ಎದುರಿಸುತ್ತಿದ್ದ ಐಎಎಸ್‌ ಅಧಿಕಾರಿಗಳ ರಕ್ಷಣೆಗೆ ಮುಂದಾಗಿದ್ದ ಹಿಂದಿನ ಎರಡು ಸರ್ಕಾರಗಳು ಎರಡು ಬಾರಿ ಸುಗ್ರಿವಾಜ್ಞೆ ತರಲು ಮುಂದಾಗಿತ್ತು. ಆದರೆ, ಸುಗ್ರೀವಾಜ್ಞೆಗೆ ಅಂಕಿತ ಹಾಕಲು ರಾಜ್ಯಪಾಲರು ನಿರಾಕರಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ಪಾಲಿಸುವಂತೆ ಕಾನೂನು ಇಲಾಖೆ, ಅಡ್ವೊಕೇಟ್‌ ಜನರಲ್ ಮತ್ತು ಆರ್ಥಿಕ ಇಲಾಖೆ ಅಭಿಪ್ರಾಯ ನೀಡಿತ್ತು.

‘ಒಂದು ವೇಳೆ ಸುಗ್ರಿವಾಜ್ಞೆಯನ್ನು ಜಾರಿ ಮಾಡಿದರೆ ಪುನಃ ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸದೇ ಇದ್ದರೆ, ಪ್ರಕರಣ ಇತ್ಯರ್ಥಗೊಳ್ಳದೇ ಬಾಕಿ ಉಳಿಯುತ್ತದೆ ಮತ್ತು ಸರ್ಕಾರವು ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ’ ಎಂದು ಯಡಿಯೂರಪ್ಪ ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

1998ನೇ ಸಾಲಿನ ಪ್ರಕರಣ ಇತ್ಯರ್ಥವಾಗದ ಕಾರಣ 2016, 2017 ಮತ್ತು 2018 ನೇ ಸಾಲಿನಲ್ಲಿ ಕರ್ನಾಟಕ ಆಡಳಿತ ಸೇವೆಯ ಅಧಿಕಾರಿಗಳಿಗೆ ಐಎಎಸ್‌ಗೆ ಮುಂಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ. ಅಲ್ಲದೆ, ಹೈಕೋರ್ಟ್‌ ನೀಡಿದ್ದ ತೀರ್ಪಿನಂತೆ ಕೆಎಎಸ್‌ ಅಧಿಕಾರಿಗಳ ಪರಿಷ್ಕೃತ ಜೇಷ್ಠತಾ ಪಟ್ಟಿಯಂತೆ ಐಎಎಸ್ ಮುಂಬಡ್ತಿಗೆ ಆಯ್ಕೆ ಸಮಿತಿಗೆ ಪ್ರಸ್ತಾವನೆ ಸಲ್ಲಿಸುವಂತೆ ಮತ್ತು ಅಲ್ಲಿವರೆಗೆ ಕರ್ನಾಟಕ ನಾಗರಿಕ ಸೇವೆಯಿಂದ(ಕೆಎಎಸ್‌) ಐಎಎಸ್‌ಗೆ ಯಾವುದೇ ಮುಂಬಡ್ತಿ ನೀಡುವುದಿಲ್ಲ ಎಂದು ಕೇಂದ್ರ ಲೋಕಸೇವಾ ಆಯೋಗವು ರಾಜ್ಯ ಸರ್ಕಾರಕ್ಕೆ ಸ್ಪಷ್ಟಪಡಿಸಿತ್ತು.

ಯಾರಿಗೆಲ್ಲಾ ಹಿಂಬಡ್ತಿ?

ಎಚ್‌. ಬಸವರಾಜೇಂದ್ರ,ಶಿವಾನಂದ ಕಾಪಸಿ,ಕವಿತಾ ಮಣ್ಣಿಕೇರಿ,ಎಚ್‌.ಎನ್‌. ಗೋಪಾಲಕೃಷ್ಣ,ಜಿ.ಸಿ. ವೃಷಭೇಂದ್ರ ಮೂರ್ತಿ,ಕರಿಗೌಡ,ಪಿ. ವಸಂತಕುಮಾರ್‌,ಎನ್‌. ಶಿವಶಂಕರ್‌,ಮೀನಾ ನಾಗರಾಜ,ಆರ್‌.ಎಸ್‌. ಪೆದ್ದಪ್ಪಯ್ಯ,ಅಕ್ರಂ ಪಾಷ.

ಸುಗ್ರೀವಾಜ್ಞೆ ವಿರುದ್ಧ ಸಿಡಿದೆದ್ದಿದ್ದ ಶಾಸಕರು

1998ನೇ ಸಾಲಿನ ಗೆಜೆಟೆಡ್ ಅಧಿಕಾರಿಗಳ ನೇಮಕಾತಿ ಅಕ್ರಮಗಳನ್ನು ಸಕ್ರಮಗೊಳಿಸಲು ಮತ್ತು 11 ಐಎಎಸ್‌ ಅಧಿಕಾರಿಗಳ ಹಿತವನ್ನು ರಕ್ಷಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎಂದು ಶಾಸಕರು ಹಿಂದಿನ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಮತ್ತು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದರು. ಸರ್ಕಾರದ ಕ್ರಮವನ್ನು ಸ್ವತಃ ರಮೇಶ್‌ ಕುಮಾರ್‌ ಅವರೂ ವಿರೋಧಿಸಿದ್ದರು. 1,200 ಅಧಿಕಾರಿಗಳ ಸೇವಾ ಜೇಷ್ಠತೆಯನ್ನು ಬಲಿಗೊಡುವ ಈ ತೀರ್ಮಾನದ ಬಗ್ಗೆ ಕೆಎಎಸ್‌ ಅಧಿಕಾರಿಗಳ ವಲಯದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.