ADVERTISEMENT

ರಾಜ್ಯದಾದ್ಯಂತ 1,141 ಸ್ಮಶಾನ ಜಾಗಗಳು ಒತ್ತುವರಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 19:58 IST
Last Updated 9 ಸೆಪ್ಟೆಂಬರ್ 2022, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ‘ರಾಜ್ಯದಾದ್ಯಂತ 1,141 ಸ್ಮಶಾನ ಜಾಗಗಳು ಒತ್ತುವರಿಯಾಗಿರುವುದನ್ನು ಗುರುತಿಸಲಾಗಿದ್ದು, 282 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಇನ್ನೂ 859 ಒತ್ತುವರಿ ತೆರವುಗೊಳಿಸಬೇಕಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಮೊಹಮ್ಮದ್ ಇಕ್ಬಾಲ್ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ. ವೀರಪ್ಪ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರ ಅನುಪಾಲನಾ ವರದಿಯನ್ನುನ್ಯಾಯಪೀಠಕ್ಕೆ ಸಲ್ಲಿಸಿ,ಶೇ 92ರಷ್ಟು ಸ್ಮಶಾನ ಜಾಗಗಳನ್ನು ಮಂಜೂರು ಮಾಡಲಾಗಿದ್ದು, ಕಾನೂನು ತೊಡಕುಗಳ ಕೆಲ ಕಾರಣಗಳಿಂದಾಗಿ ಒಂದಿಷ್ಟು ಕಡೆ ಸ್ಮಶಾನ ಜಾಗ ಮಂಜೂರು
ಮಾಡಲು ವಿಳಂಬವಾಗಿದೆ’ ಎಂದು ತಿಳಿಸಿದರು.

ADVERTISEMENT

‘ನ್ಯಾಯಾಲಯದ ಆದೇಶ ಪಾಲನೆಗೆ ಇನ್ನು ಮೂರು ವಾರಗಳ ಕಾಲಾವಕಾಶ ಬೇಕು’ ಎಂಬ ಕೋರಿಕೆಯನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ವರದಿಯಲ್ಲಿ ಏನಿದೆ?: ರಾಜ್ಯದಲ್ಲಿರುವ ಒಟ್ಟು29,616 ಗ್ರಾಮಗಳ ಪೈಕಿ 27,458 ಗ್ರಾಮಗಳಲ್ಲಿ ಸ್ಮಶಾನ ಜಾಗ ಒದಗಿಸಲಾಗಿದೆ. ಅರಣ್ಯಸಂರಕ್ಷಣಾ
ಕಾಯ್ದೆಯ ಸಮಸ್ಯೆ, ವ್ಯಾಜ್ಯಗಳು ಹಾಗೂ ಜಮೀನು ಖರೀದಿ
ಮಾಡಬೇಕಿರುವ ಕಾರಣ 600 ಗ್ರಾಮಗಳಲ್ಲಿ ಜಾಗ ಒದಗಿಸಲು ಆಗಿಲ್ಲ. 403 ಗ್ರಾಮಗಳಲ್ಲಿ ಸ್ಮಶಾನ ಜಾಗ ಒದಗಿಸಬೇಕಾಗಿದ್ದು, ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.