ADVERTISEMENT

12ರಂದು ಪೆಟ್ರೋಲ್‌ ಬಂಕ್‌ ಬಂದ್‌

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 19:51 IST
Last Updated 5 ಜುಲೈ 2017, 19:51 IST
12ರಂದು ಪೆಟ್ರೋಲ್‌ ಬಂಕ್‌ ಬಂದ್‌
12ರಂದು ಪೆಟ್ರೋಲ್‌ ಬಂಕ್‌ ಬಂದ್‌   

ಬೆಂಗಳೂರು: ‘ಪ್ರತಿನಿತ್ಯವೂ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಪರಿಷ್ಕರಣೆ ಮಾಡುವ ನಿರ್ಧಾರ ಹಿಂಪಡೆಯಬೇಕು’ ಎಂದು ಆಗ್ರಹಿಸಿ ‘ಅಖಿಲ ಭಾರತ ಪೆಟ್ರೋಲಿಯಂ ವರ್ತಕರ ಒಕ್ಕೂಟ’ದ ನೇತೃತ್ವದಲ್ಲಿ ಜುಲೈ 12ರಂದು ದೇಶದಾದ್ಯಂತ ಪೆಟ್ರೋಲ್‌ ಬಂಕ್‌ ಬಂದ್‌ಗೆ ಕರೆ ನೀಡಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ವರ್ತಕರು ಪ್ರತಿಭಟನೆಗೆ ಬೆಂಬಲ ನೀಡಿದ್ದು, ಅಂದು ತೈಲ ಖರೀದಿ ಹಾಗೂ ಮಾರಾಟ ಸಂಪೂರ್ಣ ಸ್ಥಗಿತವಾಗಲಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಈ ಬಗ್ಗೆ ಮಾತನಾಡಿದ ರಾಜ್ಯ ಪೆಟ್ರೋಲಿಯಂ ವರ್ತಕರ ಮಹಾಮಂಡಳದ ಅಧ್ಯಕ್ಷ ಮಂಜಪ್ಪ, ‘ಬೆಂಗಳೂರು, ಮೈಸೂರು, ಹಾಸನ, ಮಂಗಳೂರು, ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿ–ಧಾರವಾಡ, ವಿಜಯಪುರ, ಮೈಸೂರಿನಲ್ಲಿರುವ ತೈಲ ಕಂಪೆನಿಗಳ ಮಾರಾಟ ಘಟಕದಲ್ಲಿ ಸಾಮಾನ್ಯವಾಗಿ ವರ್ತಕರು ತೈಲ ಖರೀದಿ ಮಾಡುತ್ತಾರೆ. ಅಲ್ಲಿ ಜುಲೈ 12ರಂದು ಯಾವುದೇ ರೀತಿಯಲ್ಲೂ ತೈಲ ಖರೀದಿಸುವುದಿಲ್ಲ. ಜತೆಗೆ ಬಂಕ್‌ಗಳನ್ನು ಸಹ ಬಂದ್‌ ಮಾಡುತ್ತೇವೆ’ ಎಂದು ಹೇಳಿದರು.

‘ಬುಧವಾರವೂ ಭಾರತೀಯ ತೈಲ ನಿಗಮ (ಐಒಸಿ), ಭಾರತ್‌ ಪೆಟ್ರೋಲಿಯಂ ನಿಗಮ (ಬಿಪಿಸಿಎಲ್‌) ಹಾಗೂ ಹಿಂದೂಸ್ತಾನ್‌ ಪೆಟ್ರೋಲಿಯಂ ನಿಗಮ (ಎಚ್‌ಪಿಸಿಎಲ್‌) ಘಟಕಗಳಲ್ಲಿ  ತೈಲ ಖರೀದಿ ಮಾಡಿಲ್ಲ. ಆ ಮೂಲಕ ಸಾಂಕೇತಿಕ ಪ್ರತಿಭಟನೆ ನಡೆಸಿದೆವು’ ಎಂದರು.

‘ವರ್ತಕರ ಸಲಹೆ ಪಡೆಯದೇ ತೈಲ ಕಂಪೆನಿಗಳು ಪ್ರತಿನಿತ್ಯವೂ ದರ ಪರಿಷ್ಕರಣೆಯ ನಿರ್ಧಾರ ಕೈಗೊಂಡಿವೆ. ಇದರಿಂದ ವರ್ತಕರಿಗೆ ಆಗುವ ನಷ್ಟದ ಬಗ್ಗೆ ಚಿಂತಿಸಿಲ್ಲ. ಹೀಗಾಗಿ ಕಂಪೆನಿಗಳ ವಿರುದ್ಧ ಪ್ರತಿಭಟನೆ ಆರಂಭಿಸಿದ್ದೇವೆ’ ಎಂದು ಅವರು ಹೇಳಿದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.