
ಬೆಂಗಳೂರು: ‘ಕನಕಪುರ ತಾಲ್ಲೂಕಿನ ಜಕ್ಕಸಂದ್ರ ಪೋಸ್ಟ್ ವ್ಯಾಪ್ತಿಯಲ್ಲಿರುವ ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆಯು ₹12.96 ಕೋಟಿ ಮೊತ್ತದ ಪ್ರೊ–ರೇಟಾ (ಅನುಪಾತದ ಶುಲ್ಕ) ಶುಲ್ಕ ಭರ್ತಿ ಮಾಡಬೇಕು’ ಎಂದು ಬೆಂಗಳೂರು ಜಲಮಂಡಳಿ ನೀಡಿದ್ದ ನೀರಿನ ಡಿಮ್ಯಾಂಡ್ ನೋಟಿಸ್ ಅನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಡಿಮ್ಯಾಂಡ್ ನೋಟಿಸ್ ರದ್ದುಗೊಳಿಸುವಂತೆ ಕೋರಿ, ‘ಜೈನ್ ಅಂತರರಾಷ್ಟ್ರೀಯ ವಸತಿ ಶಾಲೆ’ ನಿರ್ದೇಶಕರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ರದ್ದುಗೊಳಿಸಿದೆ.
‘ಈಗಾಗಲೇ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು (ಬೆಸ್ಕಾಂ), ಶಿಕ್ಷಣ ಸಂಸ್ಥೆ ವಾಣಿಜ್ಯ ಕಟ್ಟಡ ಎಂದು ಪರಿಗಣಿಸಿ ಶುಲ್ಕವನ್ನು ವಸೂಲಿ ಮಾಡುತ್ತಿದೆ. ಹೀಗಾಗಿ, ನೀರಿನ ಸರಬರಾಜಿಗೂ ವಾಣಿಜ್ಯ ಕಟ್ಟಡವೆಂದು ಗುರುತಿಸಿ ಶುಲ್ಕ ಪಾವತಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ನೀಡಿರುವ ಡಿಮ್ಯಾಂಡ್ ನೋಟಿಸ್‌ನಲ್ಲಿ ಯಾವುದೇ ದೋಷಗಳಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
‘ಅನುಪಾತ ಆಧಾರಿತ ಶುಲ್ಕವನ್ನು ಪಾವತಿಸಲು ನಾವು ಬಾಧ್ಯಸ್ಥರಲ್ಲ ಎಂದು ಘೋಷಿಸಬೇಕು ಮತ್ತು ₹1,01,91,510 ಮೊತ್ತದ ಮರುಪಾವತಿ ಅಥವಾ ಹೊಂದಾಣಿಕೆಗೆ ನಿರ್ದೇಶಿಸಬೇಕು’ ಎಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ.
‘ಒಂದು ವೇಳೆ ಪ್ರಮಾಣೀಕೃತ ಶುಲ್ಕಗಳ ಲೆಕ್ಕಾಚಾರ ಅಥವಾ ಪ್ರಮಾಣಕ್ಕೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ಅರ್ಜಿದಾರರು, ಬೆಂಗಳೂರು ಜಲಮಂಡಳಿ ಕಾಯ್ದೆ–1964ರ ಕಲಂ 120ರ ಅಡಿಯಲ್ಲಿ ಮೇಲ್ಮನವಿ ಪ್ರಾಧಿಕಾರವನ್ನು ಸಂಪರ್ಕಿಸಲು ಸ್ವಾತಂತ್ರ್ಯ ನೀಡಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
‘ನಿಗದಿತ ಅವಧಿಯೊಳಗೆ ಮೇಲ್ಮನವಿ ಸಲ್ಲಿಸಿದರೆ, ಮೇಲ್ಮನವಿ ಪ್ರಾಧಿಕಾರವು ಮಿತಿಯ ಆಧಾರದಡಿ ಯಾವುದೇ ಆಕ್ಷೇಪಣೆಯನ್ನು ಎತ್ತದೆ, ಕಾನೂನಿನ ಪ್ರಕಾರ ಅರ್ಹತೆಗಳ ಮೇಲೆ ಅದನ್ನು ಪರಿಗಣಿಸಿ ವಿಲೇವಾರಿ ಮಾಡಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಪ್ರಕರಣವೇನು?: ಶಾಲೆಯ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಾಗಿರದ ಕಾರಣ, ಆಡಳಿತ ಮಂಡಳಿಯು ಹೆಚ್ಚಿನ ಪ್ರಮಾಣದ ನೀರಿನ ಪೂರೈಕೆಗೆ 2004ರಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿಯನ್ನು ಸಂಪರ್ಕಿಸಿತ್ತು. ನಿತ್ಯ 9 ಲಕ್ಷ ಲೀಟರ್ ನೀರು ಪೂರೈಸಲು ಸರ್ಕಾರ ಅನುಮೋದನೆ ನೀಡಿತ್ತು. ಪೈಪ್‌ಲೈನ್ ಅಳವಡಿಸಲು ಶಾಲೆ ₹93 ಲಕ್ಷ ಪಾವತಿಸಿ ಒಪ್ಪಂದ ಮಾಡಿಕೊಂಡಿತ್ತು.
ನೀರಿನ ದರಗಳನ್ನು 2016ರಲ್ಲಿ ಪರಿಷ್ಕರಿಸಿದ್ದ ಜಲಮಂಡಳಿ, ‘ಪ್ರೊ-ರೇಟಾ ಶುಲ್ಕವಾಗಿ ₹4.32 ಕೋಟಿ ಹಾಗೂ ಹೆಚ್ಚುವರಿ ಶುಲ್ಕ ₹8.64 ಕೋಟಿ ಪಾವತಿಸಬೇಕು. ಇಲ್ಲದಿದ್ದರೆ ಸಂಪರ್ಕ ಕಡಿತಗೊಳಿಸಲಾಗುವುದು’ ಎಂದು ಶಾಲೆಗೆ ಡಿಮ್ಯಾಂಡ್ ನೋಟಿಸ್ ಜಾರಿ ಮಾಡಿತ್ತು.
ಡಿಮ್ಯಾಂಡ್ ನೋಟಿಸ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಆಡಳಿತ ಮಂಡಳಿ, ‘ಪ್ರೊ-ರೇಟಾ ಶುಲ್ಕ ಪಾವತಿಸಬೇಕಾಗಿಲ್ಲ. ಹೆಚ್ಚುವರಿ ಶುಲ್ಕ ₹1.01 ಕೋಟಿ ಮರು ಪಾವತಿಸಲು ನಿರ್ದೇಶಿಸಬೇಕು’ ಎಂದು ಮನವಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.