ADVERTISEMENT

ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ: ವರದಿ ಸಲ್ಲಿಕೆಗೆ ಬೇಕು 12 ತಿಂಗಳು

ಕುಲಶಾಸ್ತ್ರೀಯ ಅಧ್ಯಯನ

ಕೆ.ಓಂಕಾರ ಮೂರ್ತಿ
Published 6 ಫೆಬ್ರುವರಿ 2021, 19:49 IST
Last Updated 6 ಫೆಬ್ರುವರಿ 2021, 19:49 IST
ಗ್ರಾಮವೊಂದರಲ್ಲಿ ಕುರುಬ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸುತ್ತಿರುವ ಅಧ್ಯಯನ ತಂಡ
ಗ್ರಾಮವೊಂದರಲ್ಲಿ ಕುರುಬ ಕುಟುಂಬಗಳಿಂದ ಮಾಹಿತಿ ಸಂಗ್ರಹಿಸುತ್ತಿರುವ ಅಧ್ಯಯನ ತಂಡ   

ಮೈಸೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ (ಎಸ್‌ಟಿ) ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಕುಲಶಾಸ್ತ್ರೀಯ ಅಧ್ಯಯನ ಪೂರ್ಣ ಗೊಳಿಸಿ, ವರದಿ ಸಲ್ಲಿಸಲು ಇನ್ನೂ 12 ತಿಂಗಳು ಹಿಡಿಯಲಿದೆ.

ಮೈಸೂರಿನಲ್ಲಿರುವ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಯಿಂದ 20 ತಂಡಗಳು ರಾಜ್ಯದ ವಿವಿಧೆಡೆ ತೆರಳಿ ಮಾಹಿತಿ ಕಲೆ ಹಾಕುತ್ತಿವೆ. 2019ರ ಅಕ್ಟೋಬರ್‌ನಲ್ಲಿ ಹಾವೇರಿ ಜಿಲ್ಲೆಯಲ್ಲಿ ಅಧ್ಯಯನ ಆರಂಭಿಸಿದ್ದು, ಇದುವರೆಗೆ 23 ಜಿಲ್ಲೆಗಳಲ್ಲಿ ಕುಟುಂಬವಾರು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಮೂರು ಜಿಲ್ಲೆಗಳಲ್ಲಿ ಸಮೀಕ್ಷೆ ಬಾಕಿ ಇದೆ. ಕೋವಿಡ್‌ ಕಾರಣದಿಂದಾಗಿ ಈ ಕಾರ್ಯ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಸ್ಥಗಿತಗೊಂಡಿತ್ತು.

‘ಮೊದಲ ಹಂತದ ಕುಟುಂಬ ಸಮೀಕ್ಷೆ ಮುಗಿಯುತ್ತಾ ಬಂದಿದೆ. ಸಮೀಕ್ಷೆಯಕೋಡಿಂಗ್‌ ಕಾರ್ಯ ಪ್ರಗತಿ ಯಲ್ಲಿದೆ. ಎರಡನೇ ಹಂತದಲ್ಲಿ ಆಳವಾದ ಅಧ್ಯಯನ ನಡೆಯಬೇಕಿದೆ. ಮೂರನೇ ಹಂತದಲ್ಲಿ ಸಮುದಾಯದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿಗತಿ ಕುರಿತು ವರದಿ ಸಿದ್ಧಪಡಿಸಬೇಕಿದೆ. ಬಳಿಕ ತಜ್ಞರ ಸಮಿತಿಗೆ ವರದಿಯ ಕರಡು ಪ್ರತಿ ಕಳುಹಿಸಿ ಅಭಿಪ್ರಾಯ ಪಡೆಯಬೇಕು. ಹೀಗಾಗಿ, ವರದಿ ಸಲ್ಲಿಕೆಗೆ ಕಾಲಾವಕಾಶ ಬೇಕಿದೆ’ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಟಿ.ಬಸವನಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಬೀದರ್‌, ಯಾದಗಿರಿ, ಕಲಬುರ್ಗಿ ಹಾಗೂ ಕೊಡಗು ಹೊರತುಪಡಿಸಿ ರಾಜ್ಯದ 26 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಾಗುತ್ತಿದೆ. ಪ್ರತಿ ಜಿಲ್ಲೆಯ ತಲಾ ಎರಡು ತಾಲ್ಲೂಕುಗಳಲ್ಲಿ ತಲಾ ಎರಡು ಗ್ರಾಮ ಆಯ್ಕೆ ಮಾಡಿ ಕುರುಬಸಮುದಾಯದ ಕುಟುಂಬಗಳಿಂದ ಮಾಹಿತಿ ಕಲೆಹಾಕಲಾಗುತ್ತಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ನಂಜನಗೂಡು, ತಿ.ನರಸೀಪುರ, ಸರಗೂರು ತಾಲ್ಲೂಕಿನ ಐದು ಗ್ರಾಮಗಳಲ್ಲಿ 616 ಕುಟುಂಬಗಳನ್ನು ಅಧ್ಯಯನ ತಂಡ ಭೇಟಿಯಾಗಿ ಮಾಹಿತಿ ಕಲೆ ಹಾಕಿದೆ.

‘ಇದುವರೆಗೆ 12,043 ಕುಟುಂಬಗಳ ಸಮೀಕ್ಷೆ ನಡೆಸಲಾಗಿದೆ. ನಮ್ಮ ಅಧ್ಯಯನ ತಂಡವು ಪ್ರತಿ ಗ್ರಾಮದಲ್ಲಿ ಈ ಕುಟುಂಬಗಳೊಂದಿಗೆ ಉಳಿದುಕೊಂಡು ಅಧ್ಯಯನ ನಡೆಸುತ್ತಿದೆ. ಅವರ ದೈನಂದಿನ ಚಟುವಟಿಕೆ, ಜೀವನ ಶೈಲಿ, ನಂಬಿಕೆ, ಆಚಾರ, ಸಂಪ್ರದಾಯ, ವಿವಾಹ ಪದ್ಧತಿ ಗಮನಿಸುತ್ತಿದೆ. ಅಲ್ಲದೇ, ಬುಡಕಟ್ಟು ಲಕ್ಷಣ ಗುರುತಿಸಲು ಬಿ.ಎನ್‌.ಲೋಕೂರ್‌ ಸಮಿತಿಯ ಐದು ಮಾನದಂಡಗಳಾದ ಪ್ರಾಚೀನ ಗುಣಲಕ್ಷಣಗಳು, ವಿಶಿಷ್ಟ ಸಂಸ್ಕೃತಿ, ಭೌಗೋಳಿಕ ಪ್ರತ್ಯೇಕತೆ, ಪ್ರಮುಖ ಸಮುದಾಯಗಳೊಂದಿಗೆ ಬೆರೆಯಲು ಸಂಕೋಚದ ಸ್ವಭಾವ ಮತ್ತು ಹಿಂದುಳಿದಿರುವಿಕೆ ಅಂಶಗಳಿಗೆ ಒತ್ತು ನೀಡಿ ಅಧ್ಯಯನ ನಡೆಸಲಾಗುತ್ತದೆ’ ಎಂದು ವಿವರಿಸಿದರು.

ಕುರುಬ ಸಮುದಾಯವನ್ನು ಎಸ್‌ಟಿ ಸಮುದಾಯಕ್ಕೆ ಸೇರಿಸಬೇಕೆಂದು ವಿವಿಧೆಡೆಯಿಂದ ಒತ್ತಡ ಬಂದ ಕಾರಣ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ನೀಡುವಂತೆ 2019ರ ಮೇ ತಿಂಗಳಿನಲ್ಲಿ ಸಮಾಜ ಕಲ್ಯಾಣ ಇಲಾಖೆಯುಈ ಸಂಸ್ಥೆಗೆ ನಿರ್ದೇಶನ ನೀಡಿತ್ತು. ಅಧ್ಯಯನಕ್ಕಾಗಿ ₹ 40 ಲಕ್ಷ ಮಂಜೂರು ಮಾಡಿತ್ತು. ವರದಿ ಸಲ್ಲಿಸಲು 15 ತಿಂಗಳ ಕಾಲಾವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.