ADVERTISEMENT

ಕೋವಿಡ್-19: ರಾಜ್ಯ ಮತ್ತೆ 12 ಹೊಸ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 22:10 IST
Last Updated 6 ಏಪ್ರಿಲ್ 2020, 22:10 IST
   
""

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಮತ್ತೆ 12 ಕೋವಿಡ್‌–19 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 163ಕ್ಕೆ ಏರಿದೆ. ದೆಹಲಿಗೆ ಹೋಗಿ ಬಂದ ಮೈಸೂರಿನ ಮೂವರು ಹಾಗೂ ಬೆಂಗಳೂರಿನ ಒಬ್ಬರಿಗೆ ಸೋಂಕು ತಗುಲಿರುವುದು ಕಂಡುಬಂದಿದೆ.

ಸೋಂಕು ದೃಢಪಟ್ಟವರಲ್ಲಿ ಏಳು ಮಂದಿ ಮೈಸೂರಿನಲ್ಲಿ, ಮೂವರು ಬೆಂಗಳೂರಿನಲ್ಲಿ ಹಾಗೂ ಇಬ್ಬರು ಬಾಗಲಕೋಟೆಯಲ್ಲಿ ನಿಯೋಜಿತ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸೋಂಕಿತರಲ್ಲಿ ಮೈಸೂರಿನ ಫಾರ್ಮಾ ಕಂಪನಿಯ ಮತ್ತೊಬ್ಬ ಮಹಿಳಾ ಉದ್ಯೋಗಿ, ದುಬೈಗೆ
ಹೋಗಿ ಬಂದ 35 ವರ್ಷದ ಯುವಕ, ಬಾಗಲಕೋಟೆಯ 125ನೇ ರೋಗಿಯ ಪತ್ನಿ, ಸಹೋದರ ಸೇರಿದ್ದಾರೆ.

ರಾಜ್ಯದಲ್ಲಿ ಇದುವರೆಗೆ ಕೋವಿಡ್‌–19ಗೆ ನಾಲ್ವರು ಮೃತಪಟ್ಟಿದ್ದು, 20 ಮಂದಿ ಗುಣಮುಖರಾಗಿದ್ದಾರೆ. 139 ಮಂದಿಯ ಪೈಕಿ 136 ಮಂದಿ (ಒಬ್ಬರು ಗರ್ಭಿಣಿ ಸೇರಿ) ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಇಬ್ಬರು ವೆಂಟಿಲೇಟರ್‌ನಲ್ಲಿದ್ದಾರೆ. ಒಟ್ಟು 163 ಮಂದಿಯಲ್ಲಿ 9 ಮಂದಿ ಕೇರಳದವರು. ರಾಜ್ಯದ ವಿಮಾನ ನಿಲ್ದಾಣಗಳ ಮೂಲಕ ಕೇರಳಕ್ಕೆ ತೆರಳುತ್ತಿದ್ದ ವೇಳೆ ಅವರನ್ನು ಪತ್ತೆ ಹಚ್ಚಿ ರಾಜ್ಯದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ರಾಜ್ಯದಲ್ಲಿರುವ ಎಲ್ಲಾ 21,906 ಅಂತರರಾಷ್ಟ್ರೀಯ ಪ್ರಯಾಣಿಕರ ಮನೆ ಕ್ವಾರಂಟೈನ್‌ ಅವಧಿ ಕೊನೆಗೊಂಡಿದೆ. ಇವರೂ ಸೇರಿ ಒಟ್ಟು 29,692 ಮಂದಿಯ ಮೇಲೆ ನಿಗಾ ವಹಿಸಲಾಗಿದೆ.

ನಾಲ್ವರು ಗುಣಮುಖ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾದ ಮೊದಲ ಕೋವಿಡ್‌–19 ಸೋಂಕಿತ ಭಟ್ಕಳದ ಯುವಕ ಹಾಗೂ ಕಾಸರಗೋಡಿನ ಮೂವರು ಸೇರಿದಂತೆ ಒಟ್ಟು ನಾಲ್ವರು ಸಂಪೂರ್ಣ ಗುಣಮುಖವಾಗಿದ್ದು, ಸೋಮವಾರ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ನಾಲ್ವರೂ ವಿಮಾನದ ಮೂಲಕ ದುಬೈನಿಂದ ಮಂಗಳೂರು ಅಂತರರಾಷ್ಟ್ರೀಯವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಈ ಪೈಕಿ ಭಟ್ಕಳದ 22 ವರ್ಷದ ಯುವಕ ಮತ್ತು ಕಾಸರಗೋಡಿನ 47 ವರ್ಷದ ವ್ಯಕ್ತಿಯನ್ನು ಮಾರ್ಚ್ 19ರಂದು ವಿಮಾನ ನಿಲ್ದಾಣದಿಂದ ನೇರವಾಗಿ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಕಾಸರಗೋಡಿನ 22 ಮತ್ತು 24 ವರ್ಷದ ಇಬ್ಬರು ಯುವಕರನ್ನು ಮಾರ್ಚ್‌ 20ರಂದು ದಾಖಲಿಸಲಾಗಿತ್ತು.

ಮೈಸೂರಿನಲ್ಲಿ 35 ಪ್ರಕರಣ

ಮೈಸೂರು: ಜಿಲ್ಲೆಯಲ್ಲಿ ಸೋಮವಾರ ಮತ್ತೆ ಏಳು ‘ಕೋವಿಡ್–19’ ಪ್ರಕರಣಗಳು ವರದಿಯಾಗಿದ್ದು, ಕೋವಿಡ್ ಪೀಡಿತರ ಸಂಖ್ಯೆ 35ಕ್ಕೆ ಏರಿದೆ.

ಹೊಸದಾಗಿ ಪತ್ತೆಯಾದವರಲ್ಲಿ ಮೂವರು ನವದೆಹಲಿಯಿಂದ ಬಂದವರಾಗಿದ್ದರೆ, ಒಬ್ಬರು ದುಬೈನಿಂದ ವಾಪಸ್ ಬಂದವರು. ಇನ್ನೊಬ್ಬರು ಈಹಿಂದೆ ಪತ್ತೆಯಾದ ರೋಗಿಯೊಬ್ಬರ ಸೋದರ. ಮತ್ತೊಬ್ಬರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾನೆಯ ಮಹಿಳಾ ಸಿಬ್ಬಂದಿ. ಇನ್ನೊಬ್ಬರ ಪ್ರವಾಸದ ಕುರಿತು ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ನಾಪತ್ತೆಯಾಗಿದ್ದ ಶಂಕಿತ ಪತ್ತೆ:ಕೊರೊನಾ ಶಂಕಿತನೊಬ್ಬ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್‌) ಐಸೋಲೇಷನ್‌ ವಾರ್ಡ್‌ನಿಂದ ಪರಾರಿಯಾಗಿ ಸೋಮವಾರ ಆತಂಕ ಮೂಡಿಸಿದ್ದನು. ಆದರೆ, ಕೆಲ ಹೊತ್ತಿನ ಬಳಿಕ ಶಂಕರ ಮಠದ ಉರ್ದು ಶಾಲೆ ಬಳಿ ಆತ ಪತ್ತೆಯಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.