ADVERTISEMENT

ರಾಜ್ಯದಲ್ಲಿ 12 ಹೊಸ ಸೋಂಕು ಪ್ರಕರಣ ಪತ್ತೆ: ಮಂಡ್ಯಕ್ಕೂ ಕಾಲಿಟ್ಟ ಮಹಾಮಾರಿ 

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 8:25 IST
Last Updated 7 ಏಪ್ರಿಲ್ 2020, 8:25 IST
   

ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ 12 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

ಇದು ವರೆಗೆ ಒಂದೂ ಸೋಂಕು ಪ್ರಕರಣಗಳನ್ನು ಕಾಣದ ಮಂಡ್ಯದಲ್ಲಿ ಒಂದೇ ದಿನ ಮೂರು ಪ್ರಕರಣಗಳು ಕಂಡು ಬಂದಿವೆ. ಈ ಮೂವರೂ ದೆಹಲಿಯ ಧರ್ಮಸಭೆಗೆ ಹೋಗಿ ಬಂದವರೊಂದಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಇದರೊಂದಿಗೆ ಮಂಡ್ಯ ಕೋವಿಡ್‌ ಸೋಂಕಿತ ಜಿಲ್ಲೆಗಳ ಪಟ್ಟಿಗೆ ಸೇರಿದಂತಾಗಿದೆ.

ಬಾಗಲಕೋಟೆಯ ಇಬ್ಬರಿಗೆ, ಗದಗದಲ್ಲಿ ಒಬ್ಬರಿಗೆ ಸೋಂಕು ದೃಢವಾಗಿದೆ. ಬೆಂಗಳೂರಿನಲ್ಲಿ ಮೂರು ಪ್ರಕರಣಗಳು, ಬೆಂಗಳೂರು ಗ್ರಾಮಾಂತರದಲ್ಲಿ ಒಂದು, ಮಂಡ್ಯದಲ್ಲಿ ಮೂರು, ಕಲಬುರಗಿಯಲ್ಲಿ ಎರಡು ಪ್ರಕರಣ ದೃಢವಾಗಿದೆ.

ADVERTISEMENT

ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಕೋವಿಡ್ 19 ದೃಢ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು ಒಂದರಲ್ಲೇ ಮೂವರಿಗೆ ಕೋವಿಡ್ 19 ದೃಢವಾಗಿದೆ. ಈ ಮೂವರು ದೆಹಲಿ ಮೂಲದ ಧರ್ಮಗುರುಗಳ ಸಂಪರ್ಕಕ್ಕೆ ಬಂದಿದ್ದದ್ದರು. ಮಾರ್ಚ್ 23ರಿಂದ 29ರವರೆಗೆ 10 ಮಂದಿ ಧರ್ಮಗುರುಗಳು ಮಳವಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. 10 ಮಂದಿಯಲ್ಲಿ ಐವರಿಗೆ ಈಗಾಗಲೇ ಕೋವಿಡ್ 19 ದೃಢಪಟ್ಟಿದೆ.

ಧರ್ಮಗುರುಗಳ ಸಂಪರ್ಕಕ್ಕೆ ಬಂದಿದ್ದ 49 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿತ್ತು. ಕೊರೊನಾ ಸೋಂಕಿನ ಲಕ್ಷಣ ಇರುವ 13 ಮಂದಿಯ ಗಂಟಲು ದ್ರವ, ರಕ್ತ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಸರ್ಕಾರ ಫಲಿತಾಂಶ ಪ್ರಕಟಿಸಿದ್ದು ಮೂವರಲ್ಲಿ ಕೋವಿಡ್ 19 ದೃಢಪಟ್ಟಿದೆ.

ಇನ್ನೂ 10 ಮಂದಿಯ ಫಲಿತಾಂಶ ಬರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.

ಬಾಗಲಕೋಟೆ: ಮತ್ತಿಬ್ಬರಿಗೆ ಕೊರೊನಾ ಸೋಂಕು ದೃಢ

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಮಂಗಳವಾರ ಮತ್ತಿಬ್ಬರಿಗೆ ದೃಢಪಟ್ಟಿದೆ.

ಇದರೊಂದಿಗೆ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಅವರಲ್ಲಿ ಮೊದಲ ಬಾರಿಗೆ ಸೋಂಕು ದೃಢಪಟ್ಟಿದ್ದ 75 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈಗ ವೃದ್ಧನ ಪಕ್ಕದ ಮನೆಯ 41 ವರ್ಷದ ಮಹಿಳೆಗೆ ಹಾಗೂ ಮಾರ್ಚ್ 18 ರಂದು ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲೀಗಿ ಜಮಾತ್ ನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಮುಧೋಳದ 33 ವರ್ಷದ ಯುವಕನಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಸೋಂಕಿತರಿಗೆ ಬಾಗಲಕೋಟೆ ಜಿಲ್ಲಾಸ್ಪತ್ರೆಯ ಐಸೊಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ‌ ನೀಡಲಾಗುತ್ತಿದೆ.

ಮೃತ ವೃದ್ಧನ 54 ವರ್ಷದ ಪತ್ನಿ ಹಾಗೂ 58 ವರ್ಷದ ಸಹೋದರನಿಗೆ ಕೊರೊನಾ ಸೋಂಕು ಸೋಮವಾರ ದೃಢಪಟ್ಟಿತ್ತು.


ಕಲಬುರ್ಗಿಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್-19

ಕಲಬುರ್ಗಿ: ನಗರದ ಹುಮನಾಬಾದ್ ರಿಂಗ್ ರಸ್ತೆಯ‌ ನಿವಾಸಿ ಹಾಗೂ ಶಹಾಬಾದ್ ನ ಕೋವಿಡ್ ಸೋಂಕಿತ ಮಹಿಳೆಯ ಸೊಸೆಯೊಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಏಳು ಜನರಿಗೆ ಕೋವಿಡ್ ಸೋಂಕು ತಗುಲಿದಂತಾಗಿದೆ.

ದುಬೈನಿಂದ ಬಂದಿದ್ದ 76 ವರ್ಷದ ವ್ಯಕ್ತಿಗೆ ಈ ಸೋಂಕು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಅವರು ಮಾರ್ಚ್ 10ರಂದು ಹೈದರಾಬಾದ್ ನಿಂದ ವಾಪಸ್ ಬರುವಾಗ ಕೊನೆಯುಸಿರೆಳೆದಿದ್ದರು.

ಅವರ ಪುತ್ರಿ, ಮೊದಲು ಚಿಕಿತ್ಸೆ ನೀಡಿದ್ದ ವೈದ್ಯರು ಹಾಗೂ ವೈದ್ಯನ ಪತ್ನಿಗೆ ಕೋವಿಡ್ ಸೋಂಕು ತಗುಲಿದೆ. ಆ ಪೈಕಿ ಪುತ್ರಿ ಹಾಗೂ ವೈದ್ಯ ಗುಣಮುಖರಾಗಿದ್ದಾರೆ‌.

ಶಹಾಬಾದ್ ಮಹಿಳೆಯ ‌ಪತಿಯ ತಂದೆ ದೆಹಲಿಯ ತಬ್ಲಿಗಿಯಿಂದ ವಾಪಸಾಗಿದ್ದರು. ಅವರ ಪತ್ನಿ ಹಾಗೂ ಸೊಸೆಗೆ ಸೋಂಕು ತಗುಲಿದೆ.

ಜಿಲ್ಲೆಯ ಇಬ್ಬರಿಗೆ ಹೊಸದಾಗಿ ಸೋಂಕು ತಗುಲಿರುವುದನ್ನು ಜಿಲ್ಲಾ ಶರತ್ ಬಿ. ದೃಢಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.