ADVERTISEMENT

13ರಂದು ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಹುಬ್ಬಳ್ಳಿ: ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಇದೇ 13ರಂದು ನಗರದ  ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ.

ಮುಖ್ಯಮಂತ್ರಿ ಜಗದೀಶ ಶೆಟ್ಟರ್ 36 ಕಲಾವಿದರಿಗೆ 2011-13ನೇ ಸಾಲುಗಳ ವಾರ್ಷಿಕ ಪ್ರಶಸ್ತಿ ಹಾಗೂ ಕೆ. ಹಿರಣ್ಣಯ್ಯ ದತ್ತಿ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ನಾಟಕದ ಪರಿಕರಗಳನ್ನು ತಯಾರಿಸಿ ಪೂರೈಸುವ 10 ಕಲಾವಿದರನ್ನು ಸಹ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಲಾವಿದರ ಮೆರವಣಿಗೆ: ಸಮಾರಂಭಕ್ಕೆ ಮುನ್ನ ರಾಣಿ ಚೆನ್ನಮ್ಮ ವೃತ್ತದಿಂದ ಇಂದಿರಾ ಗಾಜಿನಮನೆ ವರೆಗೆ ಪ್ರಶಸ್ತಿ ಪುರಸ್ಕೃತರನ್ನು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಗುವುದು. ನಾಡಿನ ರಂಗಾಸಕ್ತರು, ರಂಗಭೂಮಿ ಕಲಾವಿದರು, ಜಾನಪದ ಕಲಾತಂಡಗಳು ಹಾಗೂ ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು.

ಕಲಾವಿದರ ಮೆರವಣಿಗೆಯ ನಂತರ ರಂಗಗೀತೆ ಗಾಯನ ಕಾರ್ಯಕ್ರಮ ಇರುತ್ತದೆ. ನಂತರ ರಂಗಭೂಮಿಗೆ ಸಂಬಂಧಿಸಿದ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಬೆಂಗಳೂರಿನ ಸೂರ್ಯ ಕಲಾವಿದರಿಂದ `ಕರ್ನಾಟಕ ದರ್ಶನ~ ನೃತ್ಯ ನಾಟಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ನಾಟಕ ಕಂಪೆನಿಗಳಿಗೆ ಸಹಾಯಧನ:  5- 50 ವರ್ಷ ಪೂರೈಸಿದ ನಾಟಕ ಕಂಪೆನಿಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಸಹಾಯಧನ ವಿತರಿಸಲು ನಿರ್ಧರಿಸಲಾಗಿದೆ. ಈಗಾಗಲೇ 21 ಕಂಪೆನಿಗಳಿಗೆ 1.05 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಮುಂದಿನ ತಿಂಗಳು ಹಣ ವಿತರಿಸಲಾಗುವುದು ಎಂದು ಮಾಲತಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.