ADVERTISEMENT

ಶಹಾಬಾದ್: 13 ಹಳ್ಳಿಗಳು ಚಿತ್ತಾಪುರ ನ್ಯಾಯಾಲಯ ವ್ಯಾಪ್ತಿಗೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 5:59 IST
Last Updated 8 ಜೂನ್ 2020, 5:59 IST

ಶಹಾಬಾದ್: ಇಲ್ಲಿನ ತಾಲ್ಲೂಕು ಕೇಂದ್ರದ ಜೆಎಮ್‍ಎಫ್‍ಸಿ ನ್ಯಾಯಾಲಯ ವ್ಯಾಪ್ತಿಯಲ್ಲಿದ್ದ 25 ಹಳ್ಳಿಗಳ ಪೈಕಿ 13 ಹಳ್ಳಿಗಳನ್ನು ಚಿತ್ತಾಪುರ ಜೆಎಮ್‍ಎಫ್‍ಸಿ ನ್ಯಾಯಾಲಯದ ವ್ಯಾಪ್ತಿಗೆ ಸೇರಿಸಿ ಕಾನೂನು ಇಲಾಖೆ ಆದೇಶ ಹೊರಡಿಸಿದೆ.

ಶಹಾಬಾದ್ ನ್ಯಾಯಾಲಯ ವ್ಯಾಪ್ತಿಗೆ ನಗರ ಸೇರಿ 12 ಹಳ್ಳಿಗಳು ಮಾತ್ರ ಬಂದಿವೆ. ಇದರಿಂದ ಶಹಾಬಾದ್ ತಾಲ್ಲೂಕು ವ್ಯಾಪ್ತಿಗೆ 48 ಹಳ್ಳಿಗಳು ಸೇರಬೇಕು ಎಂಬ ಕೂಗಿಗೆ ಬೆಲೆ ಇಲ್ಲದಂತಾಗಿದೆ.

ಅವಿಭಜಿತ ಚಿತ್ತಾಪುರ ತಾಲ್ಲೂಕಿನಲ್ಲಿ ಈ ಹಿಂದೆ ಶಹಾಬಾದ್ ಜೆಎಮ್‍ಎಫ್‍ಸಿ ನ್ಯಾಯಾಲಯದ ವ್ಯಾಪ್ತಿಯಲ್ಲಿದ್ದ 25 ಹಳ್ಳಿಗಳು ಸೇರಿದ್ದವು. ಶಹಾಬಾದ್ ನೂತನ ತಾಲ್ಲೂಕು ಕೇಂದ್ರವಾಗಿ ಘೋಷಿಸಿದ ನಂತರ ಸುಮಾರು ಎರಡು ವರ್ಷ ಇಷ್ಟೇ ಗ್ರಾಮಗಳು ಶಹಾಬಾದ್ ನ್ಯಾಯಾಲಯದ ವ್ಯಾಪ್ತಿಗೆ ಸೇರಿಸಲ್ಪಟ್ಟಿದ್ದವು. ಆದರೆ, ಈಗ ಕಾನೂನು ಇಲಾಖೆಯ ಆಡಳಿತ ವಿಭಾಗದ ಸಹಾಯಕ ಕಾರ್ಯದರ್ಶಿಗಳು ಶಹಾಬಾದ್ ಜೆಎಂಎಫ್‍ಸಿ ವ್ಯಾಪ್ತಿಯ ಗಾಂಧಿ ನಗರ, ರಾವೂರ, ಶಂಕರವಾಡಿ, ಮಾಲಗತ್ತಿ, ಹಲಕರ್ಟಿ, ದೇವಾಪುರ, ಕೊಂಚೂರ, ಇಂಗಳಗಿ, ಕುಂದನೂರ, ಕಡಬೂರ, ಚಾಮನೂರ, ಪೇಠಶಿರೂರ, ಮುಗುಳನಾಗಾವ ಗ್ರಾಮಗಳನ್ನು ಚಿತ್ತಾಪುರ ಜೆಎಂಎಫ್‍ಸಿ ವ್ಯಾಪ್ತಿಗೆ ಸೇರಿಸಿ ಆದೇಶ ಹೊರಡಿಸಿದ್ದಾರೆ.

ADVERTISEMENT

‘ಆದೇಶದಿಂದ ಇಲ್ಲಿನ ವಕೀಲರಿಗೆ ತೊಂದರೆ ಆಗುತ್ತಿದೆ. ಈ ಹಿಂದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ ಮತ್ತಿಮೂಡ, ಕಾನೂನು ಸಚಿವರು ಮತ್ತು ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಕೇವಲ ಭರವಸೆ ನೀಡಿದ್ದಾರೆಯೇ ಹೊರತು ಕಾರ್ಯುರೂಪಕ್ಕೆ ತರುವಲ್ಲಿ ಶ್ರಮಿಸದೆ ನಿರ್ಲಕ್ಷ್ಯ ಮಾಡಿದ್ದಾರೆ. ಕೂಡಲೇ ಸಂಬಂಧಪಟ್ಟ ಶಾಸಕರು, ಸಚಿವರು ಈ ಬಗ್ಗೆ ಗಮನ ಹರಿಸಿ ಇನ್ನೂ ಹಲವು ಗ್ರಾಮಗಳನ್ನು ಸೇರ್ಪಡೆಗೊಳಿಸಬೇಕು’ ಎಂದು ವಕೀಲರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.