ಬೆಂಗಳೂರು: ‘ಶ್ರೀರಾಮ ಹದಿನಾಲ್ಕು ವರ್ಷಗಳ ವನವಾಸ ಪೂರೈಸಿ ಬಂದಂತೆ ಮೇಲ್ಮನವಿ ಸಲ್ಲಿಸಲು 13 ವರ್ಷ 319 ದಿನಗಳ ವಿಳಂಬ ಮಾಡಿರುವ ನಿಮ್ಮ ಧೋರಣೆ ನೋಡಿದರೆ ನೀವೂ ವನವಾಸ ಅನುಭವಿಸುತ್ತಿದ್ದೀರಾ’ ಎಂದು ರಾಜ್ಯ ಸರ್ಕಾರವನ್ನು ಖಾರವಾಗಿ ಪ್ರಶ್ನಿಸಿರುವ ಹೈಕೋರ್ಟ್, ಮೂಲ ಅಧಿಕಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ 11 ವರ್ಷಗಳ ನಂತರ ಮೇಲ್ಮನವಿ ಸಲ್ಲಿಸಿದ್ದ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.
ಈ ಸಂಬಂಧ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ್ದ ಮೂಲ ಪಕ್ಷಗಾರರ ಮೇಲ್ಮನವಿಯನ್ನು (ಕಂಪನಿ ಅರ್ಜಿ) ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿದೆ.
‘ಮೇಲ್ಮನವಿ ತಡವಾಗಿರುವುದಕ್ಕೆ ನಿಶ್ಚಿತ ಸಮಯದ ಮಿತಿ ಕಾಯ್ದೆ ಕಲಂ 5ರ ಅಡಿಯಲ್ಲಿ ನೀಡಬೇಕಿದ್ದ ಸಮರ್ಪಕ ಕಾರಣ ಮತ್ತು ಮಾನದಂಡವನ್ನು ಸರ್ಕಾರ ಈ ಪ್ರಕರಣದಲ್ಲಿ ಪೂರೈಸಿಲ್ಲ. ಒಂದು ವೇಳೆ ಸಮಂಜಸ ವಿವರಣೆ ನೀಡಿದ್ದರೆ ವಿಳಂಬವನ್ನು ಮನ್ನಿಸಿ ಮೇಲ್ಮನವಿ ಪರಿಗಣಿಸಬಹುದಿತ್ತು. ಆದರೆ, ಸರ್ಕಾರದ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯವನ್ನು ಪುರಸ್ಕರಿಸಲಾಗದು’ ಎಂದು ನ್ಯಾಯಪೀಠ ಹೇಳಿದೆ.
ಮೈಸೂರು ಕಿರ್ಲೋಸ್ಕರ್ ಲಿಮಿಟೆಡ್‌ನ ದಿವಾಳಿ ಪ್ರಕ್ರಿಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಫೆಬ್ರುವರಿಯಲ್ಲಿ ಏಕಸದಸ್ಯ ನ್ಯಾಯಪೀಠ ಆದೇಶ ನೀಡಿತ್ತು. ಆ ಅದೇಶವನ್ನು ಪ್ರಶ್ನಿಸಿ ಸರ್ಕಾರ ಈ ಮೇಲ್ಮನವಿ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.