ADVERTISEMENT

ಸುಳ್ಳು ಪ್ರಮಾಣಪತ್ರ ಕೊಟ್ಟ ಸಂಸ್ಥೆಗೆ ₹150 ಕೋಟಿಯ ಕಾಮಗಾರಿ

ಭದ್ರಾ ಮೇಲ್ದಂಡೆ ಯೋಜನೆಯಡಿ ಅಕ್ರಮದ ಶಂಕೆ?

ಮಂಜುನಾಥ್ ಹೆಬ್ಬಾರ್‌
Published 29 ಆಗಸ್ಟ್ 2019, 19:31 IST
Last Updated 29 ಆಗಸ್ಟ್ 2019, 19:31 IST
   

ಬೆಂಗಳೂರು: ಸುಳ್ಳು ಪ್ರಮಾಣಪತ್ರ ಕೊಟ್ಟ ಕಂಪನಿಗೆ ವಿಶ್ವೇಶ್ವರಯ್ಯ ಜಲ ನಿಗಮವು ಭದ್ರಾ ಮೇಲ್ದಂಡೆ ಯೋಜನೆಯ ₹155 ಕೋಟಿ ಮೊತ್ತದ ಕಾಮಗಾರಿ ನೀಡಿರುವ ಸಂಗತಿ ಬಯಲಿಗೆ ಬಂದಿದೆ.

ಭದ್ರಾ ಮೇಲ್ಡಂಡೆ ಯೋಜನೆಯ ಚಿತ್ರದುರ್ಗ ವಲಯದ ಕಾಲುವೆ ನಿರ್ಮಾಣದ ₹150 ಕೋಟಿಯ ಕಾಮಗಾರಿಯನ್ನು ತರಾತುರಿಯಲ್ಲಿ ನ್ಯಾಷನಲ್‌ ಪ್ರಾಜೆಕ್ಟ್ಸ್ ಕನ್‌ಸ್ಟ್ರಕ್ಷನ್‌ ಕಾರ್ಪೊರೇಷನ್‌ ಲಿಮಿಟೆಡ್‌ಗೆ (ಎನ್‌ಪಿಸಿಸಿ) ನೀಡಲಾಗಿದೆ. ಮಣಿಪುರದಲ್ಲಿ ಕಾಮಗಾರಿ ನಡೆಸಿದ ಅನುಭವ ಇದೆ ಎಂದು ಈ ಸಂಸ್ಥೆಯು ‍ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ, ವಾಸ್ತವದಲ್ಲಿ ಈ ಸಂಸ್ಥೆಯು ಅಲ್ಲಿ ಕಾಮಗಾರಿಯನ್ನೇ ನಡೆಸಿರಲಿಲ್ಲ. ಜತೆಗೆ, ಆರೇ ತಿಂಗಳಲ್ಲಿ ಯೋಜನಾ ಮೊತ್ತವನ್ನು ಹಿಗ್ಗಿಸಿ ಶೇ 5ರಷ್ಟು ಹೆಚ್ಚುವರಿ ಹಣ (ಪ್ರೀಮಿಯಂ) ಪಾವತಿಗೆ ಒಪ್ಪಿಗೆ ನೀಡಲಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಟೆಂಡರ್‌ನ ಬಳಿಕ ಕಾಮಗಾರಿ ಪ್ರಮಾಣಪತ್ರ, ಋಣ ‍ಪರಿಹಾರ ಸಾಮರ್ಥ್ಯ ಹಾಗೂ ಇತರ ದಾಖಲೆಗಳನ್ನು ರಹಸ್ಯವಾಗಿ ಪರಿಶೀಲಿಸಿ ದೃಢೀಕರಣ ಪತ್ರ ಪಡೆಯಬೇಕು ಎಂಬ ನಿಯಮ ಲೋಕೋಪಯೋಗಿ ಇಲಾಖೆಯಲ್ಲಿದೆ. ಆದರೆ, ನಿಗಮ ಈ ನಿಯಮಗಳನ್ನು ಪಾಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕಾಲುವೆ ನಿರ್ಮಾಣ ಕಾಮಗಾರಿಗಾಗಿ ನಿಗಮವು 2017ರಲ್ಲಿ ಟೆಂಡರ್ ಆಹ್ವಾನಿಸಿತು. ನಾಲ್ಕು ಸಂಸ್ಥೆಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿದವು. ನಿಗಮದ ಟೆಂಡರ್ ಪರಿಶೀಲನಾ ಸಮಿತಿಯು 2017ರ ಜೂನ್‌ 28ರಂದು ಸಭೆ ಸೇರಿ ಸಂಸ್ಥೆಗಳು ನೀಡಿದ ದಾಖಲೆಗಳನ್ನು ಪರಿಶೀಲನೆ ನಡೆಸಿತು. ‘ನ್ಯಾಷನಲ್‌ ಪ್ರಾಜೆಕ್ಟ್ಸ್‌ ಕನ್‌ಸ್ಟ್ರಕ್ಷನ್‌ ಕಾರ್ಪೊರೇಷನ್‌ ನೀಡಿರುವ ದಾಖಲೆಗಳು ಟೆಂಡರ್‌ ಅಧಿಸೂಚನೆಯ ಅರ್ಹತಾ ಷರತ್ತಿಗೆ ಅನುಗುಣವಾಗಿ ಸಮರ್ಪಕವಾಗಿದೆ. ಸಂಸ್ಥೆ ನೀಡಿರುವ ಕಾಮಗಾರಿಯ ಪ್ರಮಾಣಪತ್ರವನ್ನು ಕಾರ್ಯಪಾಲಕ ಎಂಜಿನಿಯರ್ ದೃಢೀಕರಿಸಿದ್ದಾರೆ. ಹೀಗಾಗಿ, ಸಂಸ್ಥೆಯ ತಾಂತ್ರಿಕ ಬಿಡ್‌ ಅನ್ನು ಶಿಫಾರಸು ಮಾಡಲಾಗಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್‌ ನೇತೃತ್ವದ ಪರಿಶೀಲನಾ ಸಮಿತಿ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಯಿತು. ಅದೇ ದಿನ, ತಾಂತ್ರಿಕ ಹಾಗೂ ಆರ್ಥಿಕ ಬಿಡ್‌ ತೆರೆಯಲು ಸಮಿತಿ ಶಿಫಾರಸು ಮಾಡಿತು. ತರಾತುರಿಯಲ್ಲಿ ಈ ಪ್ರಕ್ರಿಯೆ ನಡೆಸಿ ಸಂಸ್ಥೆಗೆ ಕಾಮಗಾರಿಯ ಗುತ್ತಿಗೆಯನ್ನು ನೀಡಲಾಯಿತು ಎಂದು ಮೂಲಗಳು ಹೇಳಿವೆ.

ಈ ನಡುವೆ, ಮಣಿಪುರದಲ್ಲಿ ಎನ್‌ಪಿಸಿಸಿ ಯಾವುದೇ ಕಾಮಗಾರಿಗಳನ್ನು ನಡೆಸಿಲ್ಲ ಎಂದು ಅಲ್ಲಿನ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್ ಪ್ರೀತಂ ಸಿಂಗ್‌ ಅವರು ವಿಶ್ವೇಶ್ವರಯ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೈಪ್ರಕಾಶ್ ಅವರಿಗೆ 2018ರ ಮಾರ್ಚ್‌ 9ರಂದು ಪತ್ರ ಬರೆದರು. ಈ ವಿಷಯ ಗೊತ್ತಾದ ಬಳಿಕವೂ ನಿಗಮ ಲೋಪ ಸರಿಪಡಿಸುವ ಕೆಲಸ ಮಾಡಲಿಲ್ಲ.

’ಸಾಕಷ್ಟು ಕಾಮಗಾರಿಗಳನ್ನು ನಡೆಸಿರುವ ಅನುಭವ ಹೊಂದಿರುವ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದವು. ಆದರೆ, ಈ ಸಂಸ್ಥೆಗಳಿಗೆ ಗುತ್ತಿಗೆ ನೀಡಲಿಲ್ಲ. ಜತೆಗೆ, ಏಕಾಏಕಿ ಯೋಜನಾ ವೆಚ್ಚ ಹಿಗ್ಗಿಸಲಾಯಿತು. ಈ ನಡೆ ಅನುಮಾನ ಮೂಡಿಸಿದೆ’ ಎಂದು ಜಲಸಂಪನ್ಮೂಲ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರು ಹೇಳಿದರು.

‘ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿರುವ ಬೃಹತ್‌ ಹಾಗೂ ಮಧ್ಯಮ ನೀರಾವರಿ ಮಂಡಳಿಗೆ ಈ ಕಡತವನ್ನು ಮಂಡಿಸಿ ಅನುಮೋದನೆ ಪಡೆದಿರುವುದು ನಿಯಮಬಾಹಿರ. ಸಂಸ್ಥೆ ನೀಡಿದ ಪ್ರಮಾಣಪತ್ರವನ್ನು ಆರಂಭಿಕ ಹಂತದಲ್ಲೇ ಪರಿಶೀಲನೆ ನಡೆಸಬೇಕಿತ್ತು. ಜೈಪ್ರಕಾಶ್ ಅವರು ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ನಿಗಮದಿಂದ ಅವರೇ ಕಡತ ಕಳುಹಿಸಿ ಅವರೇ ಅನುಮೋದನೆ ನೀಡಿದ್ದಾರೆ. ಇದು ಸರಿಯಲ್ಲ’ ಎಂದರು.

ಎಸಿಬಿಗೆ ಮಾಹಿತಿ ನೀಡದ ನಿಗಮ

ಕಿಕ್‌ ಬ್ಯಾಕ್‌ ಪಡೆದು ಕಾಮಗಾರಿಗೆ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು 2018ರ ಮಾರ್ಚ್‌ 3ರಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಬೇರೆ ಕಡೆಗಳಲ್ಲಿ ಕಾಮಗಾರಿ ನಡೆಸಿರುವ ಬಗ್ಗೆ ನ್ಯಾಷನಲ್‌ ಪ್ರಾಜೆಕ್ಟ್ಸ್‌ ಕನ್‌ಸ್ಟ್ರಕ್ಷನ್‌ ಕಾರ್ಪೊರೇಷನ್‌ ಹಾಗೂ ಅಮ್ಮಾ ಕನ್‌ಸ್ಟ್ರಕ್ಷನ್‌ ಇಂಡಿಯಾ ಸಂಸ್ಥೆಗಳು ನಕಲಿ ಪ್ರಮಾಣಪತ್ರ ನೀಡಿವೆ ಎಂದು ಬಿಜೆಪಿ ಮುಖಂಡರು ಆಪಾದಿಸಿದ್ದರು. ಎಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಭದ್ರಾ ಮೇಲ್ದಂಡೆ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರುವ ಕುರಿತು ಸಂಪೂರ್ಣ ಮಾಹಿತಿ, ಕಂಪನಿ ನೀಡಿರುವ ಕಾರ್ಯಾದೇಶದ ಪ್ರತಿಯನ್ನು ನೀಡುವಂತೆ ಎಸಿಬಿ ಅಧಿಕಾರಿಗಳು ನಿಗಮಕ್ಕೆ 2018ರ ಜೂನ್‌ 2ರಂದು ಪತ್ರ ಬರೆದಿದ್ದರು. ಆದರೆ, ನಿಗಮದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದ ಕಾರಣ ತನಿಖೆಗೆ ಹಿನ್ನಡೆಯಾಗಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.