ADVERTISEMENT

ದೇಶದ 24 ಬರ ಸಂಭಾವ್ಯ ಜಿಲ್ಲೆಗಳಲ್ಲಿ 16 ಕರ್ನಾಟದಲ್ಲಿದೆ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 14:31 IST
Last Updated 11 ಫೆಬ್ರುವರಿ 2025, 14:31 IST
   

ನವದೆಹಲಿ: ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರವು ದೇಶದಲ್ಲಿ 24 ಬರ ಸಂಭಾವ್ಯ ಜಿಲ್ಲೆಗಳನ್ನು ಗುರುತಿಸಿದ್ದು, ಅವುಗಳಲ್ಲಿ 16 ಕರ್ನಾಟಕ ರಾಜ್ಯದವು ಎಂದು ಕೃಷಿ ಕಲ್ಯಾಣ ಖಾತೆ ರಾಜ್ಯ ಸಚಿವ ಭಗೀರಥ್ ಚೌಧರಿ ತಿಳಿಸಿದರು. 

ಚಿಕ್ಕಬಳ್ಳಾಪುರ ಸಂಸದ ಡಾ.ಕೆ. ಸುಧಾಕರ್‌ ಲೋಕಸಭೆಯಲ್ಲಿ ಮಂಗಳವಾರ ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಸಚಿವರು, ‘ಕರ್ನಾಟಕವು ಮುಖ್ಯವಾಗಿ ಮಳೆಯಾಶ್ರಿತ ಕೃಷಿಕ ರಾಜ್ಯವಾಗಿದ್ದು, ಹೆಚ್ಚಾಗಿ ಬರಗಾಲದಿಂದ ಬಳಲುತ್ತಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಉತ್ತಮ ಮಳೆಯಾಗುತ್ತಿದೆ. ಆದರೆ, ಅದರ ಅನಿಯಮಿತ ಹಂಚಿಕೆಯಿಂದಾಗಿ, ಕೃಷಿ ಚಟುವಟಿಕೆ ಮೇಲೆ ಪರಿಣಾಮ ಉಂಟಾಗುತ್ತಿದೆ’ ಎಂದು ತಿಳಿಸಿದರು. 

‘ರಾಜ್ಯದಲ್ಲಿ ಕಳೆದ 23 ವರ್ಷಗಳಲ್ಲಿ (2001ರಿಂದ 2023) 16 ವರ್ಷಗಳನ್ನು ಬರ ವರ್ಷಗಳೆಂದು ಘೋಷಿಸಲಾಗಿದೆ. 2018ರಿಂದ ಕಾವೇರಿ ಮತ್ತು ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಪ್ರವಾಹಗಳು ಹೆಚ್ಚಾಗುತ್ತಿವೆ.  ರಾಜ್ಯದ ಉತ್ತರ ಮತ್ತು ಪೂರ್ವ ಒಣ ಪ್ರದೇಶಗಳಲ್ಲಿ ಆಲಿಕಲ್ಲು ಮಳೆಯಿಂದ ತೋಟಗಾರಿಕಾ ಬೆಳೆಗಳ ಮೇಲೆ ಪರಿಣಾಮ ಬೀರುತ್ತಿದೆ. ರಾಜ್ಯದ ದಕ್ಷಿಣ ಭಾಗದಲ್ಲೂ ಶಾಖದ ಅಲೆಗಳು ಹೆಚ್ಚುತ್ತಿವೆ’ ಎಂದು ಅವರು ಮಾಹಿತಿ ನೀಡಿದರು. 

ADVERTISEMENT

ಇನ್ನೊಂದು ಪ್ರಶ್ನೆಗೆ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಉತ್ತರಿಸಿ, ‘ಕೇಂದ್ರ ಸರ್ಕಾರವು ಪರಂಪರಾಗತ ಕೃಷಿ ವಿಕಾಸ ಯೋಜನೆ (ಪಿಕೆವಿವೈ) ಮೂಲಕ ಸಾವಯವ ಕೃಷಿಯನ್ನು ಉತ್ತೇಜಿಸುತ್ತಿದೆ. ರಾಜ್ಯದ 37,558 ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ’ ಎಂದು ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.