ADVERTISEMENT

1,700 ಟನ್‌ ಆಮ್ಲಜನಕ ಬೇಡಿಕೆ: 1,200 ಹಂಚಿಕೆ

ಕೊನೆಗೂ ಹೈಕೋರ್ಟ್‌ ಹೇಳಿದಷ್ಟು ಆಮ್ಲಜನಕ ರಾಜ್ಯಕ್ಕೆ ಮಂಜೂರು

ರಾಜೇಶ್ ರೈ ಚಟ್ಲ
Published 24 ಮೇ 2021, 21:04 IST
Last Updated 24 ಮೇ 2021, 21:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯನ್ನು ಅಂದಾಜಿಸಿ ಪ್ರತಿದಿನ 1,700 ಟನ್‌ ಆಮ್ಲಜನಕ ಹಂಚಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಈ ಮಧ್ಯೆ ಕೇಂದ್ರ ಸರ್ಕಾರ ಮಂಗಳವಾರದಿಂದ (ಮೇ 25) ಅನ್ವಯ ಆಗುವಂತೆ ರಾಜ್ಯಕ್ಕೆ ಪ್ರತಿದಿನ 1,200 ಟನ್‌ ಆಮ್ಲಜನಕ ಹಂಚಿಕೆ ಮಾಡಿದೆ.

ಈ ಪೈಕಿ, 240 ಟನ್‌ ಆಮ್ಲಜನಕವನ್ನು ಮಹಾರಾಷ್ಟ್ರದಲ್ಲಿರುವ ನಾಲ್ಕು ಉತ್ಪಾದನಾ ಘಟಕಗಳಿಂದ ಹಂಚಿಕೆ ಮಾಡಲಾಗಿದೆ. ಈ ಹಿಂದೆ ವಿಶಾಖಪಟ್ಟಣದಿಂದ ಹಂಚಿಕೆ ಮಾಡಿದ್ದ 30 ಟನ್‌ ರದ್ದುಪಡಿಸಲಾಗಿದೆ. ಅಲ್ಲದೆ, ಒಡಿಶಾದ ಘಟಕಗಳಿಂದ 70 ಟನ್‌ ಮಾತ್ರ ಹಂಚಿಕೆ ಮಾಡಲಾಗಿದೆ. ಉಳಿದಂತೆ, ರಾಜ್ಯದಲ್ಲಿಯೇ ಇರುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ (ಎಂಎಸ್‌ಎಂಇ) 60 ಟನ್‌ ಸೇರಿಸಿ 830 ಟನ್‌ ಅನ್ನು ರಾಜ್ಯದ ಏಳು ಉತ್ಪಾದನಾ ಘಟಕಗಳಿಂದ ಹಂಚಿಕೆ ಮಾಡಲಾಗಿದೆ.

ಕರ್ನಾಟಕಕ್ಕೆ ಪ್ರತಿದಿನ ಪೂರೈಸುವ ಆಮ್ಲಜನಕದ ಪಾಲನ್ನು 1,200 ಟನ್‌ಗೆ ಹೆಚ್ಚಿಸುವಂತೆ ಕೇಂದ್ರಕ್ಕೆ ‌ಹೈಕೋರ್ಟ್‌ ಮೇ 5ರಂದು ಆದೇಶ ನೀಡಿತ್ತು. ಈ ಆದೇಶಕ್ಕೆ ತಡೆ ಕೊಡುವಂತೆ ಕೇಂದ್ರ ಸರ್ಕಾರ ಅರ್ಜಿ ಹಾಕಿದ್ದರೂ, ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲವೆಂದು ಮೇ 7ರಂದು ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. ಈ ಆದೇಶದ ಬಳಿಕ ರಾಜ್ಯದ ಪಾಲನ್ನು 965 ಟನ್‌ನಿಂದ ಮೇ 11ರಿಂದ ಅನ್ವಯವಾಗುವಂತೆ 1,015 ಟನ್‌ಗೆ ಹೆಚ್ಚಿಸಲಾಗಿತ್ತು.

ADVERTISEMENT

‘ಹೊಸ ಆದೇಶದಲ್ಲಿ, ಈ ಹಿಂದೆ ಒಡಿಶಾದ ಉತ್ಪಾದನಾ ಘಟಕಗಳಿಂದ ಹಂಚಿಕೆ ಮಾಡಿದ್ದ ಆಮ್ಲಜನಕ ಪ್ರಮಾಣವನ್ನು ಕಡಿಮೆ ಮಾಡಿ, ಮಹಾರಾಷ್ಟ್ರದ ಘಟಕಗಳಿಂದ ಪಡೆಯುವಂತೆ ತಿಳಿಸಿದೆ. ಒಡಿಶಾದಿಂದ ಹಂಚಿಕೆ ಮಾಡಿದ್ದ ಆಮ್ಲಜನಕವನ್ನು ಪ್ರತಿದಿನ ರಾಜ್ಯಕ್ಕೆ ತರಲು ಸಾಧ್ಯ ಆಗಿಲ್ಲ. ಈಗ, ನೆರೆ ರಾಜ್ಯದಿಂದ (ಮಹಾರಾಷ್ಟ್ರ) ಹಂಚಿಕೆ ಮಾಡಿದ್ದರಿಂದ ಅನುಕೂಲ ಆಗಿದೆ’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ 10 ದಿನಗಳ ಹಿಂದೆ ಸೋಂಕು ದೃಢಪಟ್ಟವರಿಗೆ ಆಮ್ಲಜನಕ ಬೇಕಿರುವುದರಿಂದಾಗಿ ಬೇಡಿಕೆಯಲ್ಲಿ ಸದ್ಯ ಕುಸಿತ ಆಗಿಲ್ಲ’ ಎಂದರು.

ಎಲ್ಲಿಂದ ಎಷ್ಟು ಹಂಚಿಕೆ?
ರಾಜ್ಯದ ಉತ್ಪಾದನಾ ಘಟಕಗಳಾದ ಬಳ್ಳಾರಿ ಜೆಎಸ್‌ಡಬ್ಲ್ಯೂನಿಂದ 145, ಇನ್ನೊಕ್ಸ್ ಬೆಳ್ಳೊಕ್ಸಿ 45, ಲಿಂಡೆ ಬಳ್ಳಾರಿ– 2ನಿಂದ 170 ಮತ್ತು ಲಿಂಡೆ ಹೊಸಪೇಟೆ ಘಟಕದಿಂದ 130 ಟನ್‌ ಹಂಚಿಕೆ ಮಾಡಲಾಗಿದೆ. ಬಳ್ಳಾರಿಯ ಏರ್‌ ವಾಟರ್‌ ಘಟಕದಿಂದ ಈ ಹಿಂದೆ ಹಂಚಿಕೆ ಮಾಡಿದ್ದ 70 ಟನ್‌ ಅನ್ನು 35ಕ್ಕೆ ಇಳಿಸಲಾಗಿದೆ. ಯುನಿವರ್ಸಲ್‌ ಏರ್‌ ಪ್ರಾಡಕ್ಸ್‌ನಿಂದ 45, ಬೆಂಗಳೂರಿನ ಭರೂಕ ಘಟಕದಿಂದ 65, ಬಳ್ಳಾರಿಯ ಲಿಂಡೆ ಬೆಳ್ಳೋಕ್ಸಿಯಿಂದ 45, ಲಿಂಡೆ ಬಳ್ಳಾರಿ–1ರಿಂದ 150 ಟನ್‌, ಎಂಎಸ್‌ಎಂಇ ಘಟಕಗಳಿಂದ 60 ಟನ್‌ ಹಂಚಿಕೆ ಮಾಡಲಾಗಿದೆ.

ಉತ್ಪಾದನೆ ಸಮಸ್ಯೆ: ದಾಸ್ತಾನು ಬಳಕೆ
ಬಳ್ಳಾರಿಯ ಪ್ರಾಕ್ಸೈರ್‌ ಇಂಡಿಯಾ ಮತ್ತು ಏರ್‌ ವಾಟರ್‌ ಇಂಡಿಯಾ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಮ್ಲಜನಕ ಉತ್ಪಾದನೆಯಲ್ಲಿ ಸಮಸ್ಯೆ ಆಗಿದೆ. ಹೀಗಾಗಿ, ರಾಜ್ಯಕ್ಕೆ ಸೋಮವಾರ (ಮೇ 24) ಮತ್ತು ಮಂಗಳವಾರ (ಮೇ 25) ಆಮ್ಲಜನಕ ಪೂರೈಕೆಯಲ್ಲಿ ಶೇ 20ರಷ್ಟು (ಸುಮಾರು 220 ಟನ್‌) ಕೊರತೆ ಆಗಲಿದೆ ಎಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಈ ಎರಡೂ ಘಟಕಗಳು ಅಂದಾಜು 430 ಟನ್‌ ಪೂರೈಕೆ ಮಾಡುತ್ತಿದೆ. ಅಗತ್ಯಬಿದ್ದರೆ ಆಮ್ಲಜನಕದ ಕಾಯ್ದಿರಿಸಿದ ದಾಸ್ತಾನು (ಬಫರ್‌ ಸ್ಟಾಕ್‌) ಬಳಸುವಂತೆಯೂ ನಿರ್ದೇಶನ ನೀಡಲಾಗಿದೆ. ರಾಜ್ಯದಲ್ಲಿ ಕಳೆದ ಆರು ದಿನಗಳ ಅವಧಿಯಲ್ಲಿ (ಮೇ 17ರಿಂದ 22) ಸರಾಸರಿ 837.9 ಟನ್‌ ಆಮ್ಲಜನಕ ಬಳಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.