ADVERTISEMENT

184 ಜೋಡಿ ದಾಂಪತ್ಯಕ್ಕೆ

ಸುತ್ತೂರು ಜಾತ್ರೆಯಲ್ಲಿ ಸಾಮೂಹಿಕ ವಿವಾಹ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 19:25 IST
Last Updated 2 ಫೆಬ್ರುವರಿ 2019, 19:25 IST
ಜೋಡಿಗಳು ಸುತ್ತೂರು ಮಠದ ಆವರಣದಲ್ಲಿ ಮೆರವಣಿಗೆಯಲ್ಲಿ ಸಾಗಿದರು
ಜೋಡಿಗಳು ಸುತ್ತೂರು ಮಠದ ಆವರಣದಲ್ಲಿ ಮೆರವಣಿಗೆಯಲ್ಲಿ ಸಾಗಿದರು   

ಸುತ್ತೂರು (ಮೈಸೂರು): ಅಂಗವಿಕಲರು, ವಿಧುರ– ವಿಧವೆಯರು, ಅಂತರ್ಜಾತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಲಿಂಗಾಯತರು, ಹಿಂದುಳಿದ ವರ್ಗದವರು ಒಂದೇ ವೇದಿಕೆ ಮೇಲೆ... ಮತ್ತೊಂದೆಡೆ ಗಟ್ಟಿಮೇಳ, ಮಾಂಗಲ್ಯಂ ತಂತುನಾನೇನ, ವೇದ ಘೋಷ…

ಈ ದೃಶ್ಯಕ್ಕೆ ಸಾಕ್ಷಿಯಾಗಿದ್ದು ಸುತ್ತೂರು ಜಾತ್ರೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮ.

ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ಧಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ 184 ಜೊತೆ ವಧು– ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ‌

ADVERTISEMENT

ಮಂಡ್ಯ ತಾಲ್ಲೂಕಿನ ಉರಮರಕಸಲಗೆರೆ ಗ್ರಾಮದ ನರಸಿಂಹಸ್ವಾಮಿ ಅಂಧರು. ಅವರಿಗೆ ಬಾಳ ಬೆಳಕಾಗಿ ಕೈ ಹಿಡಿದಿದ್ದು ಗುಂಡ್ಲುಪೇಟೆ ತಾಲ್ಲೂಕಿನ ಮಾದಾಪಟ್ಟಣದ ಎಂ.ಕೆ.ಗೀತಾ.

ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮದ ಪಿ.ಪುಟ್ಟಿಗೆ ಮಾತು ಬರುವುದಿಲ್ಲ. ಅವರ ಕೈಹಿಡಿದು ದನಿಯಾಗಿರುವುದು ಗ್ರಾಮದ ಕಾರ್ಮಿಕ ಮಹೇಶ್‌.

ವಧು– ವರರಿಗೆ ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮಾಂಗಲ್ಯ ವಿತರಿಸಿದರು. ಎಲ್ಲಾ ಜೋಡಿಗಳಿಗೆ ಬೆಳ್ಳಿಯ ಉಡುಗೊರೆ ನೀಡಿದರು. ನೂತನ ವಧು– ವರರನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆಶೀರ್ವದಿಸಿದರು. ಅವರ ಪತ್ನಿ, ಶಾಸಕಿ ಅನಿತಾ ಕುಮಾರಸ್ವಾಮಿ ಪ್ರತಿಜ್ಞಾ ವಿಧಿ ಬೋಧಿಸಿದರು. ವಧುವಿಗೆ ಸೀರೆ, ರವಿಕೆ, ಮಾಂಗಲ್ಯ, ಕಾಲುಂಗುರ ಹಾಗೂ ವರನಿಗೆ ಪಂಚೆ, ಶರ್ಟು, ವಲ್ಲಿ ನೀಡಲಾಯಿತು.

₹ 800 ಖರ್ಚಿನಲ್ಲಿ ಮದುವೆ: ಸುಧಾಮೂರ್ತಿ

‘ನನ್ನ ಮದುವೆಗೆ ಖರ್ಚಾಗಿದ್ದು ಕೇವಲ ₹ 800. ಅದರಲ್ಲಿ ನಾನು ₹ 400 ಹಾಗೂ ನಾರಾಯಣಮೂರ್ತಿ ₹ 400 ಹಣ ಹಾಕಿದ್ದೆವು. ಇಳಕಲ್‌ ಸೀರೆ ಧರಿಸಿದ್ದೆ. ಬಾಡಿಗೆ ಕೊಠಡಿಯೊಂದರಲ್ಲಿ ಕೇವಲ ಅರ್ಧ ಗಂಟೆಯಲ್ಲಿ ಮದುವೆ ಮುಗಿಯಿತು. ಸನಿಹದಲ್ಲಿ ಇದ್ದ ರಾಘವೇಂದ್ರಸ್ವಾಮಿ ಮಠಕ್ಕೆ ಊಟಕ್ಕೆ ತೆರಳಿದೆವು’ ಎಂದು ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.