ADVERTISEMENT

ಪ್ರಥಮ ಪಿಯು ದಾಖಲಾತಿ ಪ್ರಕ್ರಿಯೆ ಪ್ರಾರಂಭ

ರೋಸ್ಟರ್‌ ಪದ್ಧತಿಯ ಪಾಲನೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 6:57 IST
Last Updated 13 ಆಗಸ್ಟ್ 2020, 6:57 IST
ಪಿಯುಸಿ ದಾಖಲಾತಿ ಅರ್ಜಿ ತುಂಬುತ್ತಿರುವ ವಿದ್ಯಾರ್ಥಿಗಳು
ಪಿಯುಸಿ ದಾಖಲಾತಿ ಅರ್ಜಿ ತುಂಬುತ್ತಿರುವ ವಿದ್ಯಾರ್ಥಿಗಳು    

ಬೆಂಗಳೂರು: ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಸಕ್ತ ಸಾಲಿನ (2020–21) ಪ್ರಥಮ ಪಿಯು ತರಗತಿಗಳಿಗೆ ಗುರುವಾರದಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ.

‘ಸೋಂಕು ಹರಡುವ ಸಾಧ್ಯತೆ ಇರುವುದರಿಂದ ದಾಖಲಾತಿ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕ ಮಾಡಲು ಸಾಧ್ಯವಿದ್ದಲ್ಲಿ, ಅಂತಹ ಕಾಲೇಜುಗಳು ಆನ್‌ಲೈನ್‌ ಮೂಲಕವೇ ಅರ್ಜಿ ಸ್ವೀಕರಿಸಿ, ದಾಖಲಾತಿ ಮಾಡಿಕೊಳ್ಳಬಹುದು’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಹೇಳಿದೆ.

‘ಆನ್‌ಲೈನ್‌ ಸೌಲಭ್ಯ ಇಲ್ಲದಿದ್ದಲ್ಲಿ ಆಯಾ ಕಾಲೇಜುಗಳು ವಿದ್ಯಾರ್ಥಿಗಳು ಅಥವಾ ಪೋಷಕರಿಗೆ ನೇರವಾಗಿ ಅರ್ಜಿ ವಿತರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದೂ ಇಲಾಖೆ ಸೂಚನೆ ನೀಡಿದೆ.

ADVERTISEMENT

‘ಅರ್ಜಿ ವಿತರಣೆ ವೇಳೆ ಅಥವಾ ದಾಖಲಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗುಂಪು ಸೇರದಂತೆ ನೋಡಿಕೊಳ್ಳುವುದರೊಂದಿಗೆ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಸೂಚಿಸಿದೆ.

ರೋಸ್ಟರ್‌ ಪಾಲನೆ ಕಡ್ಡಾಯ: ‘ರಾಜ್ಯದ ಎಲ್ಲ ಪಿಯು ಕಾಲೇಜುಗಳು ತಮ್ಮ ಸೂಚನಾ ಫಲಕ ಮತ್ತು ವೆಬ್‌ಸೈಟ್‌ನಲ್ಲಿ ಇಲಾಖೆಯಿಂದ ಅನುಮತಿ ಪಡೆದ ಸಂಯೋಜನೆವಾರು ಹಾಗೂ ರೋಸ್ಟರ್‌ವಾರು ಪ್ರವೇಶಗಳ ಮಾಹಿತಿ ನೀಡಬೇಕು. ದಾಖಲಾತಿ ಶುಲ್ಕಗಳ ವಿವರ ಹಾಕಬೇಕು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಪೂರ್ಣ ವಿವರ ನೀಡಬೇಕು’ ಎಂದು ಇಲಾಖೆ ಹೇಳಿದೆ.

‘2019–20ನೇ ಶೈಕ್ಷಣಿಕ ಸಾಲಿನ ಮಾರ್ಗಸೂಚಿಯಲ್ಲಿರುವಂತೆ, ದಾಖಲಾತಿ ಪ್ರಕ್ರಿಯೆಯಲ್ಲಿ ರೋಸ್ಟರ್‌ ಪದ್ಧತಿಯನ್ನು ಕಡ್ಡಾಯವಾಗಿ ಅನುಸರಿಸಬೇಕು’ ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ.

ಮಹತ್ವದ ದಿನಗಳು: ಅರ್ಜಿಯನ್ನು ಆ. 13ರಿಂದ ನಾಲ್ಕು ಕೆಲಸದ ದಿನಗಳವರೆಗೆ ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ನಂತರದ ಎರಡು ಕೆಲಸದ ದಿನಗಳಲ್ಲಿ ಸ್ವೀಕರಿಸಲಾಗುತ್ತದೆ. ನಂತರದ ಮೂರನೇ ದಿನ ಪ್ರಥಮ ಆಯ್ಕೆಪಟ್ಟಿಯನ್ನು ಪ್ರಕಟಿಸಬೇಕು. ಎರಡು ಮತ್ತು ಮೂರನೇ ಆಯ್ಕೆಪಟ್ಟಿಯನ್ನು ಮೂರು ದಿನಗಳ ಅಂತರದಲ್ಲಿ ಪ್ರಕಟಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳ ಕಟ್‌ ಆಫ್‌ ಅಂಕಗಳನ್ನು ಪ್ರಕಟಿಸಬೇಕು ಎಂದೂ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.