ಉಡುಪಿ: ಮಲ್ಪೆ ಪಡುಕೆರೆ ಬಳಿಯ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಯುವಕರು ದೈತ್ಯಗಾತ್ರದ ಅಲೆಗಳ ಹೊಡೆತಕ್ಕೆನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಉದ್ಯಾವರದ ಪಿತ್ರೋಡಿ ಮುಡ್ಡಲಗುಡ್ಡೆಯ ನಿವಾಸಿಗಳಾದ ನಿತೇಶ್ ಸಾಲ್ಯಾನ್ (27) ಮತ್ತು ನಿಶಾಂತ್ ತಿಂಗಳಾಯ (19) ಮೃತಪಟ್ಟವರು.
ಪಡುಕರೆ ಸಮುದ್ರತೀರದಲ್ಲಿ ಕೈರಂಪಣಿ ಮೀನುಗಾರಿಕೆ ಮಾಡುವ ತಂಡದಲ್ಲಿದ್ದ ಯುವಕರು ಸಮುದ್ರಕ್ಕಿಳಿದಾಗ ಈ ದುರ್ಘಟನೆ ಸಂಭವಿಸಿದೆ.
ನಿಶಾಂತ್ ತಿಂಗಳಾಯ ಅವರ ಮೃತದೇಹ ಇನ್ನೂ ಸಿಕ್ಕಿಲ್ಲ. ಸ್ಥಳೀಯ ಮೀನುಗಾರರು ಶವದ ಹುಡುಕಾಟದಲ್ಲಿ ತೊಡಗಿದ್ದಾರೆ. ನಿತೇಶ್ ಸಾಲ್ಯಾನ್ ಮೃತದೇಹ ದೊರೆತಿದ್ದು, ಉದ್ಯಾವರದಲ್ಲಿ ಅಂತಿಮ ಸಂಸ್ಕಾರ ನಡೆಸಲಾಯಿತು.
ಮದುವೆಯಾಗಿ ವರ್ಷವಾಗಿತ್ತು:
ನಿತೇಶ್ ಸಾಲ್ಯಾನ್‌ಗೆ ಮದುವೆಯಾಗಿ ಒಂದು ವರ್ಷವಾಗಿತ್ತು. ಮೃತನ ಸಹೋದರ ಧನರಾಜ್ ಕೂಡ ಮೂರು ವರ್ಷದ ಹಿಂದೆ ಕಿದಿಯೂರು ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಕುಟುಂಬದ ಆಧಾರ ಸ್ತಂಭವಾಗಿದ್ದ ನಿತೇಶ್ ಕೂಡ ಸಾವನ್ನಪ್ಪಿರುವುದು ಕುಟುಂಬಕ್ಕೆ ದೊಡ್ಡ ಆಘಾತ ಕೊಟ್ಟಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.