ADVERTISEMENT

20 ಕಲಾವಿದರಿಗೆ ಪ್ರಶಸ್ತಿ ಗೌರವ

ಕರ್ನಾಟಕ ಯಕ್ಷಗಾನ, ಬಯಲಾಟ ಅಕಾಡೆಮಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಕಲಾವಿದರು
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಕಲಾವಿದರು   

ಬೆಂಗಳೂರು: ಪ್ರತಿಭಾನ್ವಿತ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಯುವಜನರಲ್ಲಿ ಕಲೆ ಕುರಿತು ಹೆಚ್ಚು ಆಸಕ್ತಿ ಮೂಡಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2011-12 ಮತ್ತು 2012-13ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
 
`ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಲು ಪ್ರಶಸ್ತಿಗಳನ್ನು ನೀಡಿ ಗೌರವಿಸುವ ಅಗತ್ಯವಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ  ಪ್ರತಿ ಕಲಾವಿದನಿಗೂ ತಿಂಗಳಿಗೆ ರೂ 1,000 ಮಾಸಾಶನ ನೀಡುತ್ತಿದೆ. ಹಾಗೆಯೇ ಪ್ರಶಸ್ತಿಗಾಗಿ ಯಾರಿಂದಲೂ ಅರ್ಜಿಗಳನ್ನು ಆಹ್ವಾನಿಸದೆ, ಯಕ್ಷಗಾನ ಕಲೆಗಾಗಿ ಸೇವೆ ಸಲ್ಲಿಸಿರುವ ಅತ್ಯತ್ತಮ ವ್ಯಕ್ತಿಗಳನ್ನು ನಾಡಿನ ಎಲ್ಲಾ ಮೂಲೆಗಳಿಂದಲೂ ಸೂಕ್ತ ರೀತಿಯಲ್ಲಿ ಆಯ್ಕೆ ಮಾಡಲಾಗಿದೆ' ಎಂದರು. ಯಕ್ಷಗಾನದ ವಿವಿಧ ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 20 ಕಲಾವಿದರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. 
 
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಲಾವಿದ ಡಾ.ರಮಾನಂದ ಬನಾರಿ, `ಯಕ್ಷಗಾನ, ರಾಜ ಕಲೆ. ಇದರ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಿರುವುದು ಖುಷಿ ತಂದಿದೆ. ಇತರೆ ಅಕಾಡೆಮಿಗಳಲ್ಲಿ ನೀಡುವಂತೆ ಯಕ್ಷಗಾನ ಕಲಾವಿದರಿಗೂ ಉತ್ಕೃಷ್ಟ ಪ್ರಶಸ್ತಿಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದರು. 

`ಮಾಸಾಶನ ಹೆಚ್ಚಿಸಲು ಪ್ರಯತ್ನ'
ಕಲಾವಿದರೊಬ್ಬರು ಸಮಾರಂಭ ನಡೆಯುತ್ತಿದ್ದ ವೇಳೆ ವೇದಿಕೆ ಮುಂಭಾಗಕ್ಕೆ ಬಂದು, `ಯಕ್ಷಗಾನ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಈ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ರೂ 1000 ದಿಂದ ರೂ 2000ಕ್ಕೆ ಹೆಚ್ಚಿಸಬೇಕು' ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, `ಮುಂದಿನ ವರ್ಷ ಮಾಸಾಶನ ಹೆಚ್ಚಿಸಲು ಪ್ರಯತ್ನಿಸಲಾಗುವುದು' ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.