ADVERTISEMENT

20 ವರ್ಷಗಳಿಂದ ದೂರವಿದ್ದ ಪತ್ನಿಯ ದಿಢೀರ್ ಕಾಳಜಿ

ಹನುಮಂತಪ್ಪ ಗೃಹ ಬಂಧನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಜೂನ್ 2013, 19:59 IST
Last Updated 12 ಜೂನ್ 2013, 19:59 IST

ರಾಣೆಬೆನ್ನೂರು:  ಗೃಹ ಬಂಧನದಲ್ಲಿದ್ದ ತಾಲ್ಲೂಕಿನ ಬೇಲೂರು ಗ್ರಾಮದ ಹನುಮಂತಪ್ಪ ಕ್ಯಾತಪ್ಪನವರ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಅವರಿಂದ 20 ವರ್ಷಗಳಿಂದ ದೂರವಿದ್ದ ಪತ್ನಿ ತಾಯವ್ವ ಈಗ ಪತಿ ಬೇಕು. ಅವರ ಆರೈಕೆ ಮಾಡಲು ಸಿದ್ಧ ಎಂದು ಮುಂದೆ ಬಂದಿರುವುದು ಅಚ್ಚರಿ ಮೂಡಿಸಿದೆ.

ಇತ್ತ ಈವರೆಗೂ ಹನುಮಂತಪ್ಪ ಅವರನ್ನು ಆರೈಕೆ ಮಾಡಿದ್ದ ಮಾವ ನಾಗಪ್ಪ, `20 ವರ್ಷಗಳಿಂದ ಪತಿ ಮೇಲೆ ಇಲ್ಲದ ಕಾಳಜಿ ಈಗ ಇದ್ದಕ್ಕಿದ್ದಂತೆ ಹೇಗೆ ಬಂತು' ಎಂದು ಪ್ರಶ್ನಿಸಿದ್ದಾರೆ. `ಇದು ಆಸ್ತಿ ಕಬಳಿಕೆಯ ಹುನ್ನಾರ' ಎಂದು ಆರೋಪಿಸಿರುವ ನಾಗಪ್ಪ, `ತಾಯವ್ವನಿಗೆ ಪತಿ ಮೇಲೆ ಎಳ್ಳಷ್ಟೂ ಕಾಳಜಿ ಇಲ್ಲ' ಎಂದು ಟೀಕಿಸಿದ್ದಾರೆ.

ಈ ಸಂಬಂಧ ತಹಶೀಲ್ದಾರ್ ಕೆ.ಎಚ್.ಶಿವಕುಮಾರ ದೂರು ದಾಖಲಿಸಿದ್ದು, ಚಿಕಿತ್ಸೆಗಾಗಿ ಹನುಮಂತಪ್ಪ ಅವರನ್ನು ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಸೋಮವಾರ ಇಲ್ಲಿನ ಗ್ರಾಮೀಣ ಪೊಲೀಸ್ ಠಾಣೆಗೆ ಮೊಮ್ಮಕ್ಕಳೊಂದಿಗೆ ಬಂದ ತಾಯವ್ವ ಪತಿ ಬಗ್ಗೆ ಮಾಹಿತಿ ಪಡೆದುಕೊಂಡರು.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ತಾಯವ್ವ, `ಮಾಧ್ಯಮಗಳಲ್ಲಿ ಗಂಡನ ಕುರಿತಾದ ವರದಿಗಳನ್ನು ನೋಡಿ ಠಾಣೆಗೆ ಬಂದಿದ್ದೇನೆ. ಪತಿಯೊಂದಿಗೆ ಬೇಲೂರಿನಲ್ಲಿ 9 ತಿಂಗಳು ಸಂಸಾರ ಮಾಡಿದ್ದೆ. ಅತ್ತೆ ಹಾಗೂ ಪತಿಯ ಕಿರುಕುಳ ತಾಳಲಾರದೇ ಇಷ್ಟು ದಿನ ಹಾವನೂರಿನ ತವರುಮನೆಯಲ್ಲಿಯೇ ವಾಸವಾಗಿದ್ದೆ' ಎಂದರು.

`ನಂತರ ಪತಿ ಆರು ವರ್ಷಗಳ ಕಾಲ ಹಾವನೂರಿಗೆ ಹೋಗಿ ಬಂದು ಮಾಡುತ್ತಿದ್ದರು. ಹಾವನೂರಲ್ಲಿ ಇರಲು ಅವರ ಮನೆಯವರು ಬಿಡುತ್ತಿರಲಿಲ್ಲ. ನನ್ನ ಹಾಗೂ ನನ್ನ ಮಕ್ಕಳಿಗೆ ಜೀವನಾಂಶ ಕೊಡುವುದಾಗಿ ಭರವಸೆ ನೀಡಿದ ಮೇಲೆ ಪತಿಯ ವಿರುದ್ಧ ನ್ಯಾಯಾಲಯದಲ್ಲಿ ಹೂಡಲಾಗಿದ್ದ ದೂರನ್ನು ಹಿಂಪಡೆದು ರಾಜಿ ಮಾಡಿಕೊಂಡೆ. ಅಲ್ಲಿಂದ ನನ್ನ ಹಾಗೂ ಪತಿಯ ಸಂಬಂಧ ದೂರವಾಯಿತು' ಎಂದು ಅವರು ತಿಳಿಸಿದರು.

`ಪತಿಯ ಆರೈಕೆಗೆ ನಾನು ಈಗಲೂ ಸಿದ್ಧಳಿದ್ದೇನೆ. ಅವರನ್ನು ನನ್ನ ತವರೂರಿಗೇ ಕರೆದೊಯ್ಯುತ್ತೇನೆ. ಒಟ್ಟಾರೆ ನನ್ನ ಪತಿ ಗುಣಮುಖನಾಗಿ ಎಲ್ಲರಂತಾದರೆ ಸಾಕು' ಎಂದು ತಾಯವ್ವ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.