ADVERTISEMENT

25 ದೇವಾಲಯ ಅಭಿವೃದ್ಧಿಗೆ ₹ 1,140 ಕೋಟಿ: ಶಶಿಕಲಾ ಜೊಲ್ಲೆ

ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿ ಅಭಿವೃದ್ಧಿಗೆ ‘ದೈವ ಸಂಕಲ್ಪ’

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 16:36 IST
Last Updated 4 ಫೆಬ್ರುವರಿ 2022, 16:36 IST
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ   

ಬೆಂಗಳೂರು: ರಾಜ್ಯ ಸರ್ಕಾರವು ‘ದೈವ ಸಂಕಲ್ಪ’ ಯೋಜನೆಯಡಿ ‘ಎ’ ಶ್ರೇಣಿಯ 25 ದೇವಾಲಯಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಇದಕ್ಕಾಗಿ ₹ 1,140 ಕೋಟಿ ವೆಚ್ಚ ಮಾಡಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಸುದ್ದಿಗಾರರ ಜತೆಶುಕ್ರವಾರ ಮಾತನಾಡಿದ ಅವರು, ‘ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ರಾಜ್ಯದ 25 ದೇವಸ್ಥಾನಗಳನ್ನು ಅಭಿವೃದ್ಧಿಪಡಿಸಲಾಗುವುದು. ಕನಿಷ್ಠ 10 ಎಕರೆ ಜಮೀನು ಹೊಂದಿರುವ ದೇವಸ್ಥಾನಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ. ಅಲ್ಲಿ ಪಾರಂಪರಿಕ ಶೈಲಿಯ ಕಟ್ಟಡಗಳನ್ನು ನಿರ್ಮಿಸಲಾಗುವುದು’ ಎಂದರು.

ಭಕ್ತರಿಗೆ ವಸತಿ ಸೌಕರ್ಯ, ಒಳ ಚರಂಡಿ ವ್ಯವಸ್ಥೆ, ಘನ ತ್ಯಾಜ್ಯ ವಿಲೇವಾರಿ ಘಟಕ, ಬಹುಮಹಡಿ ವಾಹನ ನಿಲ್ದಾಣ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಘಟಕಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಈ ದೇವಾಲಯಗಳಲ್ಲಿ ಕಲ್ಪಿಸಲಾಗುವುದು. ದೇವಸ್ಥಾನಗಳಲ್ಲಿ ಸಂಗ್ರಹವಾಗುವ ವರಮಾನ ಬಳಸಿಕೊಂಡೇ ಈ ಯೋಜನೆ ಅನುಷ್ಠಾನ ಮಾಡಲಾಗುವುದು. ಸರ್ಕಾರದ ಹಣ ಬಳಸುವುದಿಲ್ಲ ಎಂದು ವಿವರಿಸಿದರು.

ADVERTISEMENT

ದಾನಿಗಳ ನೆರವಿನಲ್ಲಿ ಪ್ರತಿ ಜಿಲ್ಲೆಯಲ್ಲೂ ತಲಾ 10 ‘ಸಿ’ ಶ್ರೇಣಿಯ ದೇವಾಲಯಗಳನ್ನೂ ಅಭಿವೃದ್ಧಿಪಡಿಸಲಾಗುವುದು. ಪ್ರತಿ ವರ್ಷವೂ 1,000 ‘ಸಿ’ ಶ್ರೇಣಿಯ ದೇವಸ್ಥಾನಗಳ ಅಭಿವೃದ್ಧಿಗೆ ನಿರ್ಧರಿಸಲಾಗಿದೆ. ಇದಕ್ಕಾಗಿ ಎಲ್ಲ ಜಿಲ್ಲೆಗಳಲ್ಲೂ ಇರುವ ದೇವಸ್ಥಾನಗಳ ಪಟ್ಟಿಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.

ಉತ್ತರ ಕರ್ನಾಟಕ ಭಾಗದ ಭಕ್ತರ ಬೇಡಿಕೆಯಂತೆ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಕೆಲವು ಸೌಲಭ್ಯ ಒದಗಿಸುವ ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ರಾಜ್ಯ ಸರ್ಕಾರವು ಅಲ್ಲಿ ಹೊಂದಿರುವ ಜಮೀನಿನಲ್ಲಿ ₹ 85 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗುವುದು. ಇದಕ್ಕಾಗಿ ಮೊದಲ ಕಂತಿನಲ್ಲಿ ₹ 45 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದರು.

ಕಾಶಿಯಲ್ಲಿ ರಾಜ್ಯದ ಭಕ್ತರಿಗಾಗಿ ಕೆಲವು ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಕಾಶಿ ದೇವಾಲಯದ ಸಮೀಪದಲ್ಲೇ ಜಮೀನು ಮಂಜೂರು ಮಾಡುವಂತೆ ಉತ್ತರ ಪ್ರದೇಶ ಸರ್ಕಾರವನ್ನು ಕೋರಲಾಗಿದೆ. ಜಮೀನು ಮಂಜೂರು ಮಾಡಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು. ಅಯೋಧ್ಯೆಯಲ್ಲೂ ಅಂತಹ ವ್ಯವಸ್ಥೆ ಕಲ್ಪಿಸುವ ಚಿಂತನೆ ನಡೆದಿದೆ. ವಿಧಾನಮಂಡಲ ಅಧಿವೇಶನದ ಬಳಿಕ ಉತ್ತರ ಪ್ರದೇಶ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಅಲ್ಲಿಗೆ ಖುದ್ದಾಗಿ ಭೇಟಿನೀಡಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ರಾಜ್ಯದಿಂದ 12 ಜ್ಯೋತಿರ್ಲಿಂಗಗಳ ಯಾತ್ರೆ ಕೈಗೊಳ್ಳುವವರಿಗೆ ಆರ್ಥಿಕ ನೆರವು ನೀಡುವ ಪ್ರಸ್ತಾವ ಸರ್ಕಾರದ ಮುಂದಿದೆ. ಚಾರ್‌ಧಾಮ್‌ ಮತ್ತು ಮಾನಸ ಸರೋವರ ಯಾತ್ರೆ ಕೈಗೊಳ್ಳುವವರಿಗೆ ನೆರವು ನೀಡುತ್ತಿರುವ ರೀತಿಯಲ್ಲೇ ಜ್ಯೋತಿರ್ಲಿಂಗಗಳ ಯಾತ್ರಿಕರಿಗೂ ನೆರವು ನೀಡುವ ಚಿಂತನೆ ಇದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.