ADVERTISEMENT

28, 29ರಂದು ಸೌಂದರ್ಯಲಹರಿ ಪಾರಾಯಣೋತ್ಸವ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 19:58 IST
Last Updated 20 ಅಕ್ಟೋಬರ್ 2017, 19:58 IST

ಬೆಂಗಳೂರು: ರಾಷ್ಟ್ರೀಯ ಭಾವೈಕ್ಯ ಹಾಗೂ ಸಾಮಾಜಿಕ ಸಾಮರಸ್ಯ ಮೂಡಿಸುವ ಉದ್ದೇಶದಿಂದ ವೇದಾಂತ ಭಾರತೀ ವತಿಯಿಂದ ‘ದಶಮಃ ಸೌಂದರ್ಯಲಹರಿ ಪಾರಾಯಣೋತ್ಸವ ಮಹಾಸಮರ್ಪಣೆ’ ಕಾರ್ಯಕ್ರಮವನ್ನು ಇದೇ 28 ಹಾಗೂ 29ರಂದು ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಚಾಲನಾ ಸಮಿತಿಯ ಅಧ್ಯಕ್ಷ ಎಸ್‌.ಎಸ್‌.ನಾಗಾನಂದ್‌, ‘ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ 28ರಂದು ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಶಾಲಾ ವಿದ್ಯಾರ್ಥಿಗಳಿಂದ ಶಂಕರಾಚಾರ್ಯ ರಚನೆಯ ಸೌಂದರ್ಯಲಹರಿ ಹಾಗೂ ದಕ್ಷಿಣಾಮೂರ್ತಿ ಅಷ್ಟಕಗಳ ಪಾರಾಯಣ ನಡೆಯಲಿದೆ. ಅಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಪಾಲ್ಗೊಳ್ಳಲಿದ್ದಾರೆ’ ಎಂದರು.

‘29ರಂದು ಮಧ್ಯಾಹ್ನ 1ರಿಂದ 4 ಗಂಟೆಯವರೆಗೆ ಲಕ್ಷಕ್ಕೂ ಅಧಿಕ ಮಹಿಳೆಯರು ಹಾಗೂ ಪುರುಷರಿಂದ ಸಾಮೂಹಿಕ ಪಾರಾಯಣ ನಡೆಯಲಿದೆ. ಯಡತೊರೆ ಯೋಗನಂದೇಶ್ವರ ಸರಸ್ವತಿ ಮಠದ ಶಂಕರ ಭಾರತಿ ಸ್ವಾಮೀಜಿ ಸಾನ್ನಿಧ್ಯವಹಿಸುವರು. ಅಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಶಂಕರ ಭಾರತಿ ಸ್ವಾಮೀಜಿ, ‘ಶಂಕರಾಚಾರ್ಯರ ಸ್ತೋತ್ರಗಳಲ್ಲಿ ಮಾನಸಿಕ ನೆಮ್ಮದಿ, ಭಾವೈಕ್ಯ ಅಡಗಿದೆ. ಸೌಂದರ್ಯಲಹರಿಯಲ್ಲಿ 100 ಶ್ಲೋಕಗಳು ಹಾಗೂ ದಕ್ಷಿಣಾಮೂರ್ತಿ ಅಷ್ಟಕದಲ್ಲಿ 10 ಶ್ಲೋಕಗಳಿವೆ. ವಿದ್ಯಾರ್ಥಿಗಳ ಕಲಿಕೆ ದೃಷ್ಟಿಯಿಂದ ಸೌಂದರ್ಯಲಹರಿಯಲ್ಲಿ 11 ಶ್ಲೋಕಗಳು ಹಾಗೂ ದಕ್ಷಿಣಾಮೂರ್ತಿ ಅಷ್ಟಕದಲ್ಲಿ 10 ಶ್ಲೋಕಗಳನ್ನು ಹೇಳಿಕೊಡಲಾಗಿದೆ. ಸುಮಾರು 50 ಸಾವಿರ ವಿದ್ಯಾರ್ಥಿಗಳು ಪಾರಾಯಣ ಮಾಡಲಿದ್ದಾರೆ’ ಎಂದರು.

‘ಎರಡನೇ ದಿನ ನಡೆಯುವ ಕಾರ್ಯಕ್ರಮದಲ್ಲಿ 110 ಶ್ಲೋಕಗಳನ್ನು ಪಾರಾಯಣ ಮಾಡಲಿದ್ದಾರೆ. 2007ರಿಂದ ಈ ಅಭಿಯಾನ ಮಾಡುತ್ತಿದ್ದು, ಸಮಾರೋಪದ ಭಾಗವಾಗಿ ಮಹಾಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ತಿಳಿಸಿದರು.

ವಕೀಲ ಅಶೋಕ್‌ ಹಾರನಹಳ್ಳಿ, ‘ಶಂಕರಾಚಾರ್ಯರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜಾತಿ, ಮತ ಭೇದವಿಲ್ಲದೆ ಎಲ್ಲರೂ ಪಾರಾಯಣದಲ್ಲಿ ಪಾಲ್ಗೊಳ್ಳಬಹುದು’ ಎಂದರು.

ಮಾಹಿತಿಗೆ ‘ವೇದಾಂದ ಭಾರತೀ’ಯ ವೆಬ್‌ಸೈಟ್‌ www.vedantabharati.org, ಮೊಬೈಲ್‌ ಸಂಖ್ಯೆ 9880289460 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.