ಬೆಂಗಳೂರು: ‘ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ 2.84 ಲಕ್ಷ ಟನ್‌ಗಳಷ್ಟು ಗೊಬ್ಬರ ಬಾಕಿ ಉಳಿಸಿಕೊಂಡಿದೆ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ವಿಧಾನ ಪರಿಷತ್ತಿನ ಮಂಗಳವಾರದ ಕಲಾಪದ ಶೂನ್ಯವೇಳೆಯಲ್ಲಿ ಜೆಡಿಎಸ್‌ನ ಟಿ.ಎ.ಶರವಣ ಅವರು ರಸಗೊಬ್ಬರದ ಕೊರತೆ ಬಗ್ಗೆ ಪ್ರಸ್ತಾಪಿಸಿದರು. ‘ರಾಜ್ಯ ಸರ್ಕಾರವು ಅಗತ್ಯವಿರುವಷ್ಟು ಪ್ರಮಾಣದ ಗೊಬ್ಬರವನ್ನು ಪೂರೈಸಿ ಎಂದು ಕೇಂದ್ರಕ್ಕೆ ಮೊದಲೇ ಪತ್ರ ಬರೆದು ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಇದರಿಂದ ರೈತರು ತೊಂದರೆ ಅನುಭವಿಸುವುದು ತಪ್ಪುತ್ತಿತ್ತು’ ಎಂದರು.
ಚಲುವರಾಯಸ್ವಾಮಿ ಅವರು, ‘ಈ ಸಾಲಿನ ಮುಂಗಾರಿಗೆ ರಾಜ್ಯಕ್ಕೆ 12.95 ಲಕ್ಷ ಟನ್‌ಗಳಷ್ಟು ಗೊಬ್ಬರದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಕೇಂದ್ರವು ರಾಜ್ಯಕ್ಕೆ ಮಂಜೂರು ಮಾಡಿದ್ದು 11.17 ಲಕ್ಷ ಟನ್ ಮಾತ್ರ. ಮುಂಚಿತವಾಗಿ ಮನವಿ ಸಲ್ಲಿಸಿದ್ದರೂ, ಅದಕ್ಕಿಂತ ಕಡಿಮೆ ಗೊಬ್ಬರ ಮಂಜೂರು ಮಾಡಿತು’ ಎಂದು ಸದನಕ್ಕೆ ಮಾಹಿತಿ ನೀಡಿದರು.
‘ಗೊಬ್ಬರ ಆಮದು, ತಯಾರಿಕೆ, ಹಂಚಿಕೆ ಎಲ್ಲವೂ ಕೇಂದ್ರ ಸರ್ಕಾರದ್ದೇ ಹೊಣೆಗಾರಿಕೆ. ಏಪ್ರಿಲ್–ಜುಲೈ ಅವಧಿಗೆ ಹಂಚಿಕೆಯಾಗಿದ್ದ ಗೊಬ್ಬರದಲ್ಲಿ ಕೇಂದ್ರವು ನಮಗೆ 1.27 ಲಕ್ಷ ಟನ್‌ಗಳಷ್ಟು ಕಡಿಮೆ ಗೊಬ್ಬರ ಪೂರೈಸಿತ್ತು. ಹೀಗಿದ್ದೂ ಲಭ್ಯವಿರುವ ಗೊಬ್ಬರವನ್ನು ಸಮರ್ಥವಾಗಿ ವಿತರಣೆ ಮಾಡುತ್ತಿದ್ದೆವು. ವಿರೋಧ ಪಕ್ಷಗಳ ನಾಯಕರು ಸುಮ್ಮನೆ ‘ಗೊಬ್ಬರ ಕೊರತೆ’ ಎಂದು ಆರೋಪ ಮಾಡಿದ್ದರಿಂದ ಸಮಸ್ಯೆ ಎದುರಾಯಿತು’ ಎಂದರು.
‘ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ನಮಗೆ ಹಂಚಿಕೆಯಾದ ಒಟ್ಟು ಗೊಬ್ಬರದಲ್ಲಿ ಇನ್ನೂ 2.84 ಲಕ್ಷ ಟನ್ ಪೂರೈಕೆಯಾಗಿಲ್ಲ. ಕೇಂದ್ರ ಸರ್ಕಾರದಿಂದ ಇಷ್ಟು ದೊಡ್ಡ ಪ್ರಮಾಣದ ಗೊಬ್ಬರ ಬರಬೇಕಿದ್ದರೂ, ರೈತರಿಗೆ ತೊಂದರೆ ಆಗದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದ್ದೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.