ADVERTISEMENT

ಪರೀಕ್ಷೆ ಯುದ್ಧವಲ್ಲ, ಜೀವನದ ಹಂತ

ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಪಿ.ಸಿ.ಜಾಫರ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2019, 19:11 IST
Last Updated 18 ಫೆಬ್ರುವರಿ 2019, 19:11 IST
ಪಿ.ಸಿ.ಜಾಫರ್ 
ಪಿ.ಸಿ.ಜಾಫರ್    

ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿದ್ದ ಗೊಂದಲಗಳನ್ನು ನಿವಾರಿಸಿದ ಪಿ.ಸಿ.ಜಾಫರ್, ‘ಆಪ್ತ ಸಮಾಲೋಚಕ’ರಾಗಿಯೂ ಧೈರ್ಯ ತುಂಬಿದರು.

* ಗಣೇಶ್ ಧಾರವಾಡ: ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಭಯ ಶುರುವಾಗುತ್ತಿದೆ. ನಮ್ಮ ಕಾಲೇಜು ಬಿಟ್ಟು ಬೇರೆ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಲು ಹೆದರಿಕೆ.

ಜಾಫರ್: ‘ಭಯವೇಕೆ? ಚೆನ್ನಾಗಿ ಓದಿದರೆ, ಯಾವುದೇ ಸ್ಥಳವಾದರೂ ಥಟ್ಟನೇ ಉತ್ತರಗಳು ಹೊಳೆಯುತ್ತವೆ. ಪರೀಕ್ಷೆ ಎಂಬುದು ಯುದ್ಧವಲ್ಲ, ಜೀವನದ ಹಂತವಷ್ಟೇ.

ADVERTISEMENT

* ಶಾಂತಲಾ ನಿರಂಜನ್ ಸಕಲೇಶಪುರ: ನನ್ನ ಮಗ ಏರೋನಾಟಿಕ್ಸ್ ಎಂಜಿನಿಯರಿಂಗ್ ಮಾಡಬೇಕು ಎಂದುಕೊಂಡಿದ್ದಾನೆ. ಸಿಇಟಿಯಲ್ಲಿ ಎಷ್ಟನೇ ರ‍್ಯಾಂಕ್‌ ಬಂದರೆ ಸೀಟು ಸಿಗುತ್ತದೆ.

ಜಾಫರ್: ವರ್ಷ ವರ್ಷ ರ‍್ಯಾಂಕ್‌ನಲ್ಲಿ ವ್ಯತ್ಯಾಸ ಆಗುತ್ತದೆ. ಹಿಂದಿನ ವರ್ಷದ ರ‍್ಯಾಂಕ್‌ ಪಟ್ಟಿಗಳು ಇಲಾಖೆ ಜಾಲತಾಣದಲ್ಲಿದ್ದು, ಪರಿಶೀಲಿಸಿ. ಆದರೆ, ರ‍್ಯಾಂಕ್ ಎಂದು ಮಗನ ಮೇಲೆ ಒತ್ತಡ ಹಾಕಬೇಡಿ. ಅವನ ಪಾಡಿಗೆ ಓದಲು ಬಿಡಿ.

* ಮಲ್ಲಿಕಾರ್ಜುನ್‌ ಧಾರವಾಡ : ಉತ್ತರ ಬರೆಯಲು ಸಮಯವೇ ಸಾಲುವುದಿಲ್ಲ.

ಜಾಫರ್: ಹಳೇ ಹಾಗೂ ಮಾದರಿ ಪ್ರಶ್ನೆಪತ್ರಿಕೆಗೆ ಮನೆಯಲ್ಲೇ ಕುಳಿತು ಉತ್ತರ ಬರೆದು ಅಭ್ಯಾಸ ಮಾಡು. ನಿತ್ಯವೂ ಒಂದೊಂದು ಪ್ರಶ್ನೆಪತ್ರಿಕೆ ಬಿಡಿಸಿದರೆ ವಾರ್ಷಿಕ ಪರೀಕ್ಷೆಯಲ್ಲಿ ನಿಗದಿತ ಸಮಯದಲ್ಲಿ ಉತ್ತರ ಬರೆಯಲು ಸಾಧ್ಯವಾಗುತ್ತದೆ.

* ಚೈತ್ರಾ ನವಲಗುಂದ: ಪೂರ್ವಭಾವಿ ಪರೀಕ್ಷೆಯಲ್ಲಿ ಗಣಿತದಲ್ಲಿ ಕೇವಲ 70 ಅಂಕ ಬಂದಿದೆ. ಇನ್ನು ಜಾಸ್ತಿ ಅಂಕ ಬರಬೇಕು. ಏನು ಮಾಡಲಿ.

ಜಾಫರ್: ಗಣಿತ ಕಷ್ಟ ಅಂತಾ ಭಯಪಡಬೇಡ. ಗಣಿತದ ಯಾವ ಪಾಠ ತಿಳಿಯುವುದಿಲ್ಲವೋ ಅದನ್ನು ನಾಲ್ಕೈದು ಬಾರಿ ಓದು.

* ವಿದ್ಯಾಶ್ರೀ ಬ್ಯಾಡಗಿ: ಉತ್ತರಗಳನ್ನು ಕ್ರಮವಾಗಿ ಬರೆಯಬೇಕೋ. ಮೊದಲನೆಯದ್ದು ಕೊನೆಗೆ, ಕೊನೆಯದ್ದು ಮೊದಲು ಬರೆಯಬಹುದಾ?

ಜಾಫರ್: ಯಾವುದೇ ಕ್ರಮದಲ್ಲಾದರೂ ಉತ್ತರಿಸಬಹುದು. ಪ್ರಶ್ನೆಗಳ ಸಂಖ್ಯೆಗಳನ್ನು ಸರಿಯಾಗಿ ನಮೂದಿಸಬೇಕು. ಒಂದು ಅಂಕದ ಪ್ರಶ್ನೆಗಳನ್ನು ಒಂದೇ ಕಡೆ ಬರೆಯಬೇಕು. ಮೊದಲ ಪುಟದಲ್ಲಿ ಒಂದು ಅಂಕದ ಉತ್ತರ ಬರೆದು, ಅದನ್ನೇ ಕೊನೆ ಪುಟದಲ್ಲೂ ಬರೆಯಬಾರದು. ಆ ರೀತಿ ಮಾಡಿದರೆ ಎರಡಕ್ಕೂ ಅಂಕ ಸಿಗುವುದಿಲ್ಲ.

‘ಪ್ರಶ್ನೆಗಳಿಗೆ ಉತ್ತರ ನಿಖರವಾಗಿರಲಿ’

* ದುಂಡಪ್ಪ, ಬೆಳಗಾವಿ: ನಾಲ್ಕು ಅಂಕದ ಪ್ರಶ್ನೆಗಳಿಗೆ ಎಷ್ಟು ಉತ್ತರ ಬರೆಯಬೇಕು?

ಜಾಫರ್: ಪ್ರಶ್ನೆಪತ್ರಿಕೆಯಲ್ಲಿ ಪ್ರತಿ ಪ್ರಶ್ನೆಗೆ ಎಷ್ಟು ವಾಕ್ಯದಲ್ಲಿ ಉತ್ತರಿಸಬೇಕು ಎಂದು ಹೇಳಲಾಗಿರುತ್ತದೆ. ಅಷ್ಟೇ ವಾಕ್ಯದಲ್ಲಿ ಸ್ಪಷ್ಟ ಹಾಗೂ ನಿಖರವಾಗಿ ಉತ್ತರ ಬರಿ. ಸ್ಟೈಲಿಶ್ ಆಗಿ ಏನೇನೂ ಬರೆಯಬೇಡ. ಮೌಲ್ಯಮಾಪಕರು ಓದುವುದಿಲ್ಲ.
ಶಾಲಾ– ಕಾಲೇಜು ಶುಲ್ಕಕ್ಕೆ ಕಡಿವಾಣ ಶೀಘ್ರ

ಎಸ್.ಸೋಮಶೇಖರ್, ಭದ್ರಾವತಿ, ‘ನಮ್ಮಲ್ಲಿಯ ಖಾಸಗಿ ಕಾಲೇಜೊಂದರಲ್ಲಿ ಪಿಯುಸಿ ಮುಗಿಸಲು ₹5 ಲಕ್ಷದಿಂದ ₹6 ಲಕ್ಷ ಖರ್ಚಾಗುತ್ತಿದೆ. ನಾವು ಸಾಮಾನ್ಯ ಜನ. ಅಷ್ಟು ಹಣ ಕೊಟ್ಟು ಮಕ್ಕಳನ್ನು ಓದಿಸಲು ಸಾಧ್ಯವೆ?’ ಎಂದರು.

ಜಾಫರ್, ‘ಶುಲ್ಕ ನಿಯಂತ್ರಣ ಸಂಬಂಧ ನಿಯಮ ಇದ್ದು, ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಹೊಸ ನಿಯಮದ ಕರಡು ಸಿದ್ಧಪಡಿಸಲಾಗಿದ್ದು, ಸದ್ಯದಲ್ಲೇ ಜಾರಿಗೆ ತಂದು ಶುಲ್ಕಕ್ಕೆ ಕಡಿವಾಣ ಹಾಕಲಾಗುವುದು’ ಎಂದು ಭರವಸೆ ನೀಡಿದರು. ಪೋಷಕರಿಗೆ ಕಿವಿಮಾತು ಹೇಳಿದ ಜಾಫರ್, ‘ಶುಲ್ಕ ಹೆಚ್ಚಿರುವ ಶಾಲೆಯಲ್ಲಿ ಓದಿದರೆ ಮಾತ್ರ ಮಕ್ಕಳು ಜಾಣರಾಗುತ್ತಾರೆ? ಎಂಬ ತಪ್ಪು ಕಲ್ಪನೆ ಪೋಷಕರಲ್ಲಿದೆ. ಮಕ್ಕಳು ಚೆನ್ನಾಗಿ ವ್ಯಾಸಂಗ ಮಾಡಿದರೆ ಯಾವ ಶಾಲೆಯಾದರೂ ಮುಂದೆ ಬರುತ್ತಾರೆ. ಅದಕ್ಕೆ, ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ ಓದಿ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕನಾಗಿರುವ ನಾನೇ ಉದಾಹರಣೆ’ ಎಂದರು.
ಪರೀಕ್ಷಾ ಕೇಂದ್ರ ದೂರ: ಹೋಗಲು ಭಯ

ಗೋವಿಂದರಾಜ್ ಶೆಣೈ, ಬಂಟ್ವಾಳ: ನಮ್ಮಲ್ಲಿ ಪರೀಕ್ಷಾ ಕೇಂದ್ರಗಳು ದೂರ ಇವೆ. ಅಲ್ಲಿಗೆ ಹೋಗಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ. ನಮ್ಮೂರಿನಲ್ಲೇ ಕೇಂದ್ರ ಮಾಡಿ.

ಜಾಫರ್: ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗದು. ಶಿಕ್ಷಕರು, ಪಾಠ ಮಾಡಿದ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರಾಗಲು ಅವಕಾಶವಿಲ್ಲ. ಈ ನಿಯಮ ಪಾಲಿಸದಿದ್ದರೆ, ಪರೀಕ್ಷೆಯನ್ನು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ನಡೆಸಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.