ADVERTISEMENT

ಭೂಕುಸಿತ ತಡೆಗೆ ₹300 ಕೋಟಿ ಯೋಜನೆ: ಸಚಿವ ಕೃಷ್ಣ ಬೈರೇಗೌಡ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 10:24 IST
Last Updated 31 ಜುಲೈ 2024, 10:24 IST
   

ಹಾಸನ: ರಾಜ್ಯದಲ್ಲಿ ಭೂಕುಸಿತ ಸ್ಥಳಗಳನ್ನು ಗುರುತಿಸಿ ಸುಮಾರು ₹300 ಕೋಟಿ ವೆಚ್ಚದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಸಕಲೇಶಪುರ ತಾಲ್ಲೂಕಿನ ಶಿರಾಡಿ ಘಾಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಡ್ಡ ಕುಸಿತ ಹಾಗೂ ಹೆದ್ದಾರಿ ಪಕ್ಕದಲ್ಲಿನ ಭೂ ಕುಸಿತ ತಡೆಯುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ಮಾಡಿದೆ. ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸಿದ್ದು, ಅವರು ಅಂಗೀಕಾರ ನೀಡಿದ್ದಾರೆ ಎಂದರು.

ಈ ವರ್ಷ ₹100 ಕೋಟಿ ಹಾಗೂ ಮುಂದಿನ ₹200 ಕೋಟಿ ವೆಚ್ಚದೊಂದಿಗೆ ಗುಡ್ಡ ಕುಸಿಯದಂತೆ ತಡೆಗೋಡೆ ನಿರ್ಮಾಣ ಸೇರಿದಂತೆ ಇತರೆ ರಕ್ಷಣಾತ್ಮಕ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿಯೇ ಜಿಯಾಲಾಜಿಕಲ್‌ ಸರ್ವೆ ಆಫ್ ಇಂಡಿಯಾದವರಿಂದ ಮಾಹಿತಿ ಪಡೆದು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ವಿವರಿಸಿದರು.

ADVERTISEMENT

ಹಾಸನದಲ್ಲಿ ಮಂಗಳವಾರ ಭೂಕುಸಿತ ಆಗಿದೆ. ನಮ್ಮ ಅದೃಷ್ಟ ಯಾರಿಗೂ ಏನೂ ತೊಂದರೆ ಆಗಿಲ್ಲ. ವಾಹನಗಳನ್ನು ಸಿಬ್ಬಂದಿ ಹೊರ ತೆಗೆದಿದ್ದಾರೆ. ಶಿರಾಡಿ ಘಾಟ್ ಸಮಸ್ಯೆ ಇಂದು ನಿನ್ನೆಯದಲ್ಲ. ಇದು ಹಲವು ವರ್ಷಗಳಿಂದ ಇದ್ದು, ಗುಡ್ಡಗಳನ್ನು ನೇರವಾಗಿ ಕಡಿದಿದ್ದರಿಂದ ಸಮಸ್ಯೆ ಹೆಚ್ಚಾಗಿದೆ ಎಂದರು.

ಶಿರಾಡಿ ಘಾಟ್ ರಸ್ತೆ ಭೂಕುಸಿತ ಸಂಬಂಧ ಸಮಸ್ಯೆಗಳನ್ನು ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾದಿಂದ ವರದಿಯನ್ನು ಪಡೆಯುತ್ತೇವೆ. ಈಗ ಏನಾಗಿದೆ? ಯಾವ ರೀತಿ ಆಗಬೇಕು ಎಂದು ವರದಿಯನ್ನು ಪಡೆದು ಮುಖ್ಯಮಂತ್ರಿ ಮೂಲಕ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಲು ತಾಕೀತು ಮಾಡುತ್ತೇವೆ ಎಂದರು.

ನಮ್ಮ ರಾಜ್ಯದ ಹಲವು ಕಡೆ ಗುಡ್ಡ ಕುಸಿತ ಆಗಿದೆ. ಈ ಬಗ್ಗೆ ಶೀಘ್ರವೇ ಭೂಕುಸಿತ ಆಗುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವ ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಮಂಗಳವಾರ ವಯನಾಡಿನಲ್ಲಿ ನಡೆದ ಘಟನೆ ನಮಗೆ ಎಚ್ಚರಿಕೆ ಗಂಟೆಯಾಗಿದೆ‌. ನಮಗೆ ಇಷ್ಟ ಬಂದ ಹಾಗೆ ಕೆಲಸ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದರು.

ವಯನಾಡಿಗೆ ನಮ್ಮ ಸರ್ಕಾರದ ಇಬ್ಬರು ಅಧಿಕಾರಿಗಳನ್ನು ಕಳುಹಿಸಲಾಗಿದೆ. ಕೇರಳ ಸರ್ಕಾರಕ್ಕೆ ಬೇಕಾದ ನೆರವನ್ನು ಕೂಡ ನೀಡುತ್ತಿದ್ದೇವೆ. ಇಂದು ಕೇರಳದಲ್ಲಿ ಆಗಿದ್ದು, ನಾಳೆ ಎಲ್ಲಿ ಬೇಕಾದರೂ ಆಗಬಹುದು. ಜನರು, ಸರ್ಕಾರ ಎಲ್ಲರೂ ಎಚ್ಚೆತ್ತುಕೊಳ್ಳಬೇಕು. ಈ ರೀತಿ ಘಟನೆ ಆಗದಂತೆ ಜನರ ಸಹಕಾರವು ಅತಿ ಮುಖ್ಯವಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.