ADVERTISEMENT

ಜಿಲ್ಲೆಗೊಂದರಂತೆ 31 ಗೋವು ದತ್ತು – ನಟ ಸುದೀಪ್

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 19:31 IST
Last Updated 24 ನವೆಂಬರ್ 2022, 19:31 IST
ಪ್ರಭು ಬಿ.ಚವ್ಹಾಣ ಅವರ ಜೊತೆ ಸುದೀಪ್‌ ಅವರು ‌ತಮ್ಮ ನಿವಾಸದಲ್ಲಿ ಗುರುವಾರ ಗೋವಿಗೆ ಆಹಾರ ತಿನ್ನಿಸಿದರು.
ಪ್ರಭು ಬಿ.ಚವ್ಹಾಣ ಅವರ ಜೊತೆ ಸುದೀಪ್‌ ಅವರು ‌ತಮ್ಮ ನಿವಾಸದಲ್ಲಿ ಗುರುವಾರ ಗೋವಿಗೆ ಆಹಾರ ತಿನ್ನಿಸಿದರು.   

ಬೆಂಗಳೂರು: ‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆಗಳಲ್ಲಿ ತಲಾ ಒಂದರಂತೆ 31 ಗೋವುಗಳನ್ನು ದತ್ತು ಪಡೆಯುತ್ತೇನೆ’ ಎಂದು ಚಿತ್ರನಟ ಸುದೀಪ್ ಗುರುವಾರ ಹೇಳಿದರು.

ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ ಅವರ ಜೊತೆ ತಮ್ಮ ನಿವಾಸದಲ್ಲಿ ಗೋಪೂಜೆ ನೆರವೇರಿಸಿದ ಅವರು, ‘ಪುಣ್ಯಕೋಟಿ ದತ್ತು ಯೋಜನೆಯ ರಾಯಭಾರಿಯಾಗಿ ನನ್ನನ್ನು ನೇಮಿಸಿ ಸರ್ಕಾರ ಜವಾಬ್ದಾರಿ ಹೆಚ್ಚಿಸಿದೆ’ ಎಂದರು.

‘ಸಾರ್ವಜನಿಕರು, ಕಲಾವಿದರು, ಸಾರ್ವಜನಿಕ ಸಂಘ ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಬೇಕು’ ಎಂದು ಮನವಿ ಮಾಡಿದರು. ಸುದೀಪ್ ಅವರಿಗೆ ಪುಣ್ಯಕೋಟಿ ದತ್ತು ಯೋಜನೆ ರಾಯಭಾರಿ ನೇಮಕ, ಪತ್ರ ವಿತರಿಸಿ, ಸ್ಮರಣಿಕೆ ನೀಡಿ ಸಚಿವರುಸನ್ಮಾನಿಸಿದರು.

ADVERTISEMENT

‘ಮುಖ್ಯಮಂತ್ರಿಯವರು ತಮ್ಮ ಜನ್ಮದಿನದಂದು 11 ಗೋವು ದತ್ತು ಪಡೆದು, ದತ್ತು ಯೋಜನೆ ಜಾರಿಗೆ ತಂದರು. ನಾನು ಕೂಡ 31 ಗೋವು ದತ್ತು ಪಡೆದಿದ್ದೇನೆ’ ಎಂದು ಸಚಿವರು ಹೇಳಿದರು. ಆಗ ‘ನಾನು ದತ್ತು ಪಡೆಯುತ್ತಿದ್ದೇನೆ’ ಎಂದು ಸುದೀಪ್ ಪ್ರತಿಕ್ರಿಯಿಸಿದರು.

‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದ ನಂತರ 100 ಸರ್ಕಾರಿ ಗೋಶಾಲೆ ಸ್ಥಾಪಿಸಲಾಗುತ್ತಿದೆ.‌ ಗೋಶಾಲೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ, ಸಾರ್ವಜನಿಕರ ಸಹಕಾರದಿಂದ ಯಾವುದೇ ಅಡಚಣೆಯಿಲ್ಲದೆ ನಡೆಸುವುದು ಈ ಯೋಜನೆ ಉದ್ದೇಶ’ ಎಂದು ಸಚಿವರು ಹೇಳಿದರು.‌

ಇಲಾಖೆಯ ಕಾರ್ಯದರ್ಶಿ ಡಾ. ಸಲ್ಮಾ ಕೆ. ಫಾಹೀಮ್, ಆಯುಕ್ತೆ ಎಸ್. ಅಶ್ವತಿ, ಹೆಚ್ಚುವರಿ ನಿರ್ದೇಶಕ ಡಾ.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.